ಬಲು ರೋಚಕ ಬಹುಕೋಟಿ ಉದ್ಯಮಿ ರೋಷನ್ ಸಲ್ಡಾನನ ನಿಗೂಢ ಐಷಾರಾಮಿ ಬದುಕು
ಮಂಗಳೂರು : ಉದ್ಯಮಿಗಳಿಗೆ ಬಹುಕೋಟಿ ರೂಪಾಯಿ ವಂಚಿಸಿದ ಆರೋಪದಲ್ಲಿ ಸೆರೆಯಾಗಿರುವ ಮಂಗಳೂರು ಜಪ್ಪಿನಮೊಗರಿನ ರೋಷನ್ ಸಲ್ಡಾನನ ಐಷಾರಾಮಿ ಜೀವನದ ಒಂದೊಂದೇ ರೋಚಕ ಮಾಹಿತಿ ಪೊಲೀಸ್ ವಿಚಾರಣೆ ಮುಂದುವರಿದಂತೆಲ್ಲ ಬಯಲಾಗಿ ಜನರನ್ನು ಬೆಚ್ಚಿಬೀಳಿಸುತ್ತಿದೆ. ಮಂಗಳೂರು ನಗರದಲ್ಲೂ ಈ ರೀತಿಯ ಒಬ್ಬ ವಂಚಕ ಇರಲು ಸಾಧ್ಯವೇ ಎಂದು ಜನರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.
ರೋಷನ್ ಸಲ್ಡಾನ ಹೆಣೆದಿರುವ ವಂಚನೆಯ ಮಾಯಾಜಾಲ ಕಂಡು ಸ್ವತಹ ಮಂಗಳೂರು ಪೊಲೀಸರೇ ದಂಗಾಗಿದ್ದಾರೆ. ರೋಷನ್ ಸಲ್ಡಾನ ಕೋಲ್ಕತ್ತಾ, ಮುಂಬಯಿ, ಪುಣೆ, ಲಖನೌ, ಅಸ್ಸಾಂ ತನಕದ ಉದ್ಯಮಿಗಳಿಗೆ ವಂಚಿಸಿದ್ದಾನೆ. ಈ ಪರಿಯಲ್ಲಿ ವಂಚಿಸಲು ಅವನು ಯಾವ ರೀತಿ ಬುದ್ಧಿವಂತಿಕೆ ಉಪಯೋಗಿಸಿರಬಹುದು ಎಂದು ಜನರು ಮಾತ್ರವಲ್ಲ ಪೊಲೀಸರು ಕೂಡ ವಿಸ್ಮಯ ಪಡುತ್ತಿದ್ದಾರೆ.
ಮಹಾರಾಷ್ಟ್ರದ ಓರ್ವ ಉದ್ಯಮಿಗೆ 5 ಕೋಟಿ ರೂ., ಮಹಾರಾಷ್ಟ್ರದ ಮತ್ತೊಬ್ಬ ಉದ್ಯಮಿಗೆ 10 ಕೋಟಿ ರೂ. ಮತ್ತು ಅಸ್ಸಾಂನ ಓರ್ವ ಉದ್ಯಮಿಯಿಂದ 20 ಲಕ್ಷ ರೂಪಾಯಿ ಪಡೆದು ವಂಚಿಸಿದ್ದಾನೆ ಎಂಬ ವಿವರಗಳು ತನಿಖೆಯಿಂದ ತಿಳಿದು ಬಂದಿವೆ. ವಂಚನೆಗೊಳಗಾದ ಉದ್ಯಮಿಗಳು ಇದೀಗ ಮಂಗಳೂರಿನ ಸಿಇಎನ್ ಪೊಲೀಸ್ ಠಾಣೆಗೆ ಆಗಮಿಸಿ ದೂರು ನೀಡುತ್ತಿದ್ದಾರೆ. ಪೊಲೀಸರು ಬ್ಯಾಂಕ್ಗಳಿಗೆ ಸಂಪರ್ಕಿಸಿ ಮಹಾರಾಷ್ಟ್ರದ ಉದ್ಯಮಿಗೆ ಸಂಬಂಧಿಸಿದ ರೂ 3.5 ಕೋಟಿ ಹಣ ಹಾಗೂ ಅಸ್ಸಾಂ ರಾಜ್ಯದ ಓರ್ವ ವ್ಯಕ್ತಿಗೆ ಸಂಬಂಧಿಸಿದ 20 ಲಕ್ಷ ರೂ. ಹಣವನ್ನು ಪ್ರೀಜ್ ಮಾಡಿಸಿದ್ದಾರೆ.
2.75 ಕೋಟಿ ರೂ. ಬೆಲೆಯ ಉಂಗುರ ಧರಿಸುತ್ತಿದ್ದ
ರೋಷನ್ ಸಲ್ಡಾನಾ 2.75 ಕೋಟಿ ರೂಪಾಯಿ ಮೌಲ್ಯದ ವಜ್ರದ ಉಂಗುರ ಧರಿಸುತ್ತಿದ್ದ ಎಂದು ತಿಳಿದುಬಂದಿದೆ. ಸದ್ಯ ಮಂಗಳೂರು ಪೊಲೀಸರು ಈ ಉಂಗುರವನ್ನು ವಶಕ್ಕೆ ಪಡೆದಿದ್ದಾರೆ. ಈತ ಮೂಲತಃ ಮಂಗಳೂರಿನ ಬಜಾಲ್ ಬೊಲ್ಲಗುಡ್ಡದ ನಿವಾಸಿ ಎಂದು ತಿಳಿದುಬಂದಿದೆ. ಅವನ ಬ್ಯಾಂಕ್ ಖಾತೆಯನ್ನು ಸ್ತಂಭನಗೊಳಿಸಲು ತನಿಖಾಧಿಕಾರಿಗಳು ಸೂಚನೆ ನೀಡಿದ್ದಾರೆ.
ಮನೆಯಲ್ಲಿದೆ ಗುರೂಜಿ ಫೋಟೊ, ಸುಸಜ್ಜಿತ ಗ್ರಂಥಾಲಯ
ರೋಷನ್ ಸಲ್ಡಾನನ ಮಂಗಳೂರಿನ ಜಪ್ಪಿನಮೊಗರುವಿನ ಬೃಹತ್ ಬಂಗಲೆ ಎಷ್ಟು ಐಷಾರಾಮಿಯಾಗಿತ್ತೋ ಅಷ್ಟೇ ಅಭಿರುಚಿಯಿಂದಲೂ ಕೂಡಿತ್ತು. ಈ ಬಂಗಲೆಗೆ ತನ್ನ ಬಲೆಗೆ ಬಿದ್ದ ಮಿಕಗಳನ್ನು ಕರೆಸಿ ವ್ಯವಹಾರ ಕುದುರಿಸುತ್ತಿದ್ದ. ರೋಹನ್ ಕೈಸ್ತ ಸಮುದಾಯದವನಾದರೂ ಹಿಂದೂ ಗುರೂಜಿಯೊಬ್ಬರ ಬೃಹತ್ ಫೋಟೋ ಹಾಕಿದ್ದ. ಸುಸಜ್ಜಿತವಾದ ಗ್ರಂಥಾಲಯದಲ್ಲಿ ಸಾವರ್ಕರ್ ಸೇರಿದಂತೆ ಅನೇಕ ಪ್ರಮುಖರು ಬರೆದ ಪುಸ್ತಕಗಳಿದ್ದವು. ದುಬಾರಿ ಬೆಲೆಯ ಪುಸ್ತಕಗಳನ್ನು ಕೂಡ ಸಂಗ್ರಹಿಸಿಟ್ಟಿದ್ದ. ಇವೆಲ್ಲ ಉದ್ಯಮಿಗಳಲ್ಲಿ ತನ್ನ ಬಗ್ಗೆ ಒಂದು ಅಭಿಪ್ರಾಯ ಮೂಡಿಸಿ ನಂಬಿಕೆ ಹುಟ್ಟಿಸಲು ಅನುಸರಿಸಿದ ತಂತ್ರವಾಗಿರಬಹುದು ಎಂದು ಪೊಲೀಸರು ಅನುಮಾನಿಸಿದ್ದಾರೆ.
ಉತ್ತರ ಪ್ರದೇಶದ ಹಿಂದೂ ಗುರೂಜಿ ನೀಮ್ ಕರೋಲಿ ಬಾಬಾ ಫೋಟೋವನ್ನು ರೋಷನ್ ತನ್ನ ಆಫೀಸ್ ಕೋಣೆಯಲ್ಲಿ ಹಾಕಿಸಿದ್ದ. ಆ ಮೂಲಕ ಉತ್ತರ ಭಾರತದ ಬಹುಕೋಟಿ ಉದ್ಯಮಿಗಳನ್ನು ವಂಚನೆಗೆ ನಾನು ಬಾಬಾ ಭಕ್ತ ಅಂತ ನಂಬಿಸುತ್ತಿದ್ದ ಎನ್ನಲಾಗಿದೆ.
50ಕ್ಕೂ ಹೆಚ್ಚು ಹೈ ಕ್ವಾಲಿಟಿ ಸಿಸಿಟಿವಿ ಕಣ್ಗಾವಲು
ರೋಷನ್ ಸಲ್ಡಾನನಿಗೆ ಕಾವಲುಗಾರರ ಮೇಲೆ ನಂಬಿಕೆ ಇರಲಿಲ್ಲ. ಹೀಗಾಗಿ ತನ್ನ ಬಂಗಲೆಗೆ ಪೂರ್ತಿಯಾಗಿ ಸಿಸಿಟಿವಿ ಕಣ್ಗಾವಲನ್ನೇ ಹಾಕಿದ್ದ. ಬಂಗಲೆಗೆ ಕಡಿಮೆಯೆಂದರೂ 50 ಹೈ ಕ್ವಾಲಿಟಿ ಸಿಸಿಟಿವಿಗಳನ್ನು ಅಳವಡಿಸಿದ್ದ. ಮನೆಗೆ ಬರುವವರನ್ನು ದೂರದಿಂದಲೇ ಗುರುತಿಸಲು ಅನುಕೂಲವಾಗುವಂತೆ ಆಯಕಟ್ಟಿನ ಜಾಗಗಳಲ್ಲಿ ಸಿಸಿಟಿವಿಗಳಿವೆ. ಮನೆಯ ಮೂಲೆಮೂಲೆಯೂ ಸಿಸಿಟಿವಿ ಕಣ್ಗಾವಲಿನಲ್ಲಿ ಇರುವಂತೆ ನೋಡಿಕೊಂಡಿದ್ದ. ಇವೆಲ್ಲವನ್ನೂ ನೋಡಲು ಬೃಹತ್ ಟಿವಿ ಪರದೆಯನ್ನೂ ಅಳವಡಿಸಿಕೊಂಡಿದ್ದ.
























