ತೀವ್ರಗೊಂಡ ಸಿದ್ದರಾಮಯ್ಯ-ಡಿಕೆಶಿ ತಿಕ್ಕಾಟ : ಹೈಕಮಾಂಡ್‌ ತೇಪೆ ವ್ಯರ್ಥ

ಸಾಧನಾ ಸಮಾವೇಶದಲ್ಲಿ ಡಿಸಿಎಂಗೆ ಸಿಎಂ ನೇರ ಟಕ್ಕರ್‌

ಬೆಂಗಳೂರು: ಹೈಕಮಾಂಡ್‌ ಎಷ್ಟೇ ತೇಪೆ ಹಾಕಿದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನಡುವೆ ಮೂಡಿರುವ ಬಿರುಕು ಮುಚ್ಚಿಕೊಳ್ಳುತ್ತಿಲ್ಲ ಎನ್ನುವುದು ನಿನ್ನೆ ಮೈಸೂರಿನಲ್ಲಿ ನಡೆದ ಸಾಧನಾ ಸಮಾವೇಶದಲ್ಲಿ ಜಗಜ್ಜಾಹೀರಾಗಿದೆ. ಈ ಸಮಾವೇಶದಲ್ಲಿ ಡಿಕೆಶಿಗೆ ಸ್ವಾಗತ ಕೋರಲು ಸಿದ್ದರಾಮಯ್ಯ ನಿರಾಕರಿಸಿರುವುದು ಇದಕ್ಕೂ ಮೊದಲು ಡಿಕೆಶಿ ತನ್ನ ಭಾಷಣ ಮುಗಿಸಿ ಅರ್ಧದಲ್ಲೇ ನಿರ್ಗಮಿಸಿರುವುದು ಕಾಂಗ್ರೆಸ್‌ನೊಳಗೆ ಮತ್ತೊಂದು ಸುತ್ತಿನ ಒಳಜಗಳಕ್ಕೆ ದಾರಿ ಮಾಡಿಕೊಟ್ಟಿದೆ.

ಮೈಸೂರಿನಲ್ಲಿ ನಡೆಯುತ್ತಿದ್ದ ಸಮಾವೇಶದಿಂದ ದಿಢೀರ್ ನಿರ್ಗಮಿಸಿದ ಡಿ.ಕೆ ಶಿವಕುಮಾರ್ ತರಾತುರಿಯಲ್ಲಿ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ವೈಯಕ್ತಿಕ ಕೆಲಸಕ್ಕಾಗಿ ದೆಹಲಿಗೆ ಪ್ರಯಾಣ ಎನ್ನಲಾಗಿದೆ. ಮೈಸೂರಿನಲ್ಲಿ ಕಾರ್ಯಕ್ರಮ ಅರ್ಧಕ್ಕೆ ಬಿಟ್ಟು ದೆಹಲಿಗೆ ಹೊರಟ ಡಿಕೆಶಿ ನಡೆ ತೀವ್ರ ಕುತೂಹಲ ಮೂಡಿಸಿದೆ.





















































 
 

ಇತ್ತೀಚಿಗಷ್ಟೇ ಡಿಕೆಶಿ ದಿಢೀರನೇ ದೆಹಲಿಗೆ ಹೋಗಿದ್ದರು. ಈಗ ಮತ್ತೆ ತರಾತುರಿಯಲ್ಲಿ ಬೆಂಗಳೂರಿನಿಂದ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಸಿಎಂ ಅವರ ಪದೇಪದೆ ಮುಜುಗರದ ಹೇಳಿಕೆಗಳಿಗೆ ಡಿಸಿಎಂ ಡಿಕೆಶಿ ಬೇಸತ್ತು ದೆಹಲಿಗೆ ತೆರಳಿದ್ದಾರಾ ಎಂಬ ಪ್ರಶ್ನೆ ಮೂಡಿದೆ. ಖಾಸಗಿ ಕೆಲಸದ ನೆಪದಲ್ಲಿ ಡಿಕೆಶಿ ದೆಹಲಿಗೆ ಭೇಟಿಯ ರಹಸ್ಯ ಕಾಯ್ದಿಟ್ಟುಕೊಂಡಿದ್ದಾರೆ. ಡಿಕೆಶಿ ದೆಹಲಿ ಭೇಟಿ ಹಿಂದೆ ಯಾವ ಅಸಮಾಧಾನದ ಹೊಗೆ ಇದೆ ಎಂದು ಇನ್ನಷ್ಟೇ ತಿಳಿಯಬೇಕಿದೆ. ಜುಲೈ 11 ಹಾಗೂ 12ರಂದು ಶಿರಡಿಗೆ ತೆರಳಿದ್ದ ಡಿಕೆಶಿ ದಿಢೀರ್ ದೆಹಲಿಗೆ ಭೇಟಿ ಕೊಟ್ಟಿದ್ದರು. ಇದೀಗ ಎಂಟೇ ದಿನಗಳ ಅಂತರದಲ್ಲಿ ಮತ್ತೆ ಏಕಾಏಕಿ ದೆಹಲಿಗೆ ಭೇಟಿ ನೀಡಿರುವುದು ಕುತೂಹಲ ಕೆರಳಿಸಿದೆ.

ಸಾಧನಾ ಸಮಾವೇಶದಲ್ಲಿ ಭಾಷಣ ಮಾಡಲು ನಿಂತ ಸಿದ್ದರಾಮಯ್ಯ ವೇದಿಕೆಯಲ್ಲಿದ್ದ ಎಲ್ಲರ ಹೆಸರು ಹೇಳಿದರೂ ಡಿಕೆಶಿ ಹೆಸರು ಉಲ್ಲೇಖಿಸಿರಲಿಲ್ಲ. ಇದನ್ನು ಕಾಂಗ್ರೆಸ್‌ ಮುಖಂಡರೊಬ್ಬರು ಹತ್ತಿರ ಬಂದು ಕಿವಿಯಲ್ಲಿ ಹೇಳಿದಾಗ ಕೆಂಡಾಮಂಡಲರಾದ ಸಿದ್ದರಾಮಯ್ಯ ಆ ಮುಖಂಡನನ್ನು ವೇದಿಕೆಯಲ್ಲೇ ತರಾಟೆಗೆ ತೆಗೆದುಕೊಂಡಿದ್ದಾರೆ. ಭಾಷಣದಲ್ಲಿ ಸ್ವಾಗತ ಕೋರುವುದು ವೇದಿಕೆಯಲ್ಲಿ ಉಪಸ್ಥಿತರಿದ್ದವರಿಗೆ ಮಾತ್ರ. ವೇದಿಕೆಯಲ್ಲಿ ಇಲ್ಲದವರನ್ನು ನಾನು ಸ್ವಾಗತಿಸುವುದಿಲ್ಲ. ಡಿಕೆಶಿ ಇಲ್ಲಿಂದ ಹೋಗಿಯಾಗಿದೆ, ಅವರ ಹೆಸರು ಉಲ್ಲೇಖಿಸುವ ಅಗತ್ಯವಿಲ್ಲ ಎಂದು ಬಹಿರಂಗವಾಗಿಯೇ ಸಿದ್ದರಾಮಯ್ಯ ಹೇಳಿದ್ದಾರೆ.

ಇತ್ತೀಚೆಗಿನ ದಿಲ್ಲಿ ಭೇಟಿ ವೇಳೆ ಐದು ವರ್ಷ ನಾನೇ ಸಿಎಂ ಎಂದು ಸಿದ್ದರಾಮಯ್ಯ ಘೋಷಿಸಿಕೊಂಡಿದ್ದರು. ಆ ಬಳಿಕ ಸಿದ್ದರಾಮಯ್ಯ ಬಣದ ಬಲ ಹೆಚ್ಚಾಗಿರುವಂತೆ ಕಂಡುಬಂದಿದೆ. ಹೀಗಾಗಿ ಅವರೀಗ ಮುಸುಕಿನ ಗುದ್ದಾಟ ಬಿಟ್ಟು ನೇರವಾಗಿ ಟಕ್ಕರ್‌ ಕೊಡಲು ತೊಡಗಿದ್ದಾರೆ. ಇತ್ತ ಡಿಕೆಶಿ ಪಾಳಯ ಮುಖ್ಯಮಂತ್ರಿ ಹುದ್ದೆಗೆ ಕಾದು ಹತಾಶಗೊಂಡಿದ್ದು, ಸಿದ್ದರಾಮಯ್ಯನವರ ಪಟ್ಟುಗಳಿಂದ ಕಂಗಾಲಾಗಿದೆ.

error: Content is protected !!
Scroll to Top