ಪುತ್ತೂರು: ಬ್ರ್ಯಾಂಡ್ ಮಂಗಳೂರು ಕಾರ್ಯರೂಪಕ್ಕೆ ಬರುವಲ್ಲಿ ಜಿಲ್ಲೆಯ ಪತ್ರಕರ್ತರ ಕೊಡುಗೆ ಸಾಕಷ್ಟಿದೆ. ಅದೇ ರೀತಿ ಜಿಲ್ಲೆಯ ಎರಡನೇ ಅತಿದೊಡ್ಡ ನಗರವಾದ ಪುತ್ತೂರನ್ನು ಕೇಂದ್ರೀಕರಿಸಿಕೊಂಡು ಬ್ರ್ಯಾಂಡ್ ಪುತ್ತೂರು ಪರಿಕಲ್ಪನೆ ಸಾಕಾರಗೊಳಿಸುವ ನಿಟ್ಟಿನಲ್ಲಿ ಪತ್ರಕರ್ತರು ಮುಂದೆ ನಿಂತು ಮಹತ್ವದ ಕೊಡುಗೆ ನೀಡಬೇಕು ಎಂದು ಪುತ್ತೂರು ನಗರಸಭೆ ಪೌರಾಯುಕ್ತರಾದ ಮಧು ಎಸ್. ಮನೋಹರ್ ಹೇಳಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಪುತ್ತೂರು ಪತ್ರಿಕಾ ಭವನದಲ್ಲಿ ಶನಿವಾರ ನಡೆದ ಪತ್ರಿಕಾ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪುತ್ತೂರು ನಗರದ ಆಡಳಿತ ಸುಧಾರಣೆ ಮಾಡುವಲ್ಲಿ ಪತ್ರಕರ್ತರು ಸಾಕಷ್ಟು ಕೊಡುಗೆ ನೀಡುತ್ತಿದ್ದಾರೆ. ಮಾಧ್ಯಮಗಳಲ್ಲಿ ಬರುವ ಟೀಕೆ, ವಿಮರ್ಶೆ, ಸಮಸ್ಯೆ ಬಿಂಬಿತ ಸುದ್ದಿಗಳನ್ನು ನಾವು ಧನಾತ್ಮಕವಾಗಿ ಸ್ವೀಕರಿಸಿಕೊಂಡು ಸಾಕಷ್ಟು ಬದಲಾವಣೆ ತಂದಿದ್ದೇವೆ ಎಂದು ಅವರು ನುಡಿದರು.
ಲೇಖನ ಬಹಳ ಹರಿತವಾದುದು. ಅದು ಬಹುದೊಡ್ಡ ಕ್ರಾಂತಿ ಮಾಡಬಲ್ಲುದು. ಆರಂಭದ ಕಾಲಘಟ್ಟದಲ್ಲಿ ಪತ್ರಿಕೆಗಳು ದೇಶದ ಸ್ವಾತಂತ್ರ್ಯಕ್ಕಾಗಿ ಕೆಲಸ ಮಾಡಿದವು. ಸ್ವಾತಂತ್ರಾನಂತರದಲ್ಲಿ ಮಾಧ್ಯಮಗಳು ದೇಶ ಸುಧಾರಣೆಗಾಗಿ ಕೆಲಸ ಮಾಡುತ್ತಿವೆ. ಇವತ್ತಿನ ಡಿಜಿಟಲ್ ಯುಗದಲ್ಲಿ ಮಾಧ್ಯಮ ಮಾಹಿತಿ ಸಾಕಷ್ಟು ವೇಗವಾಗಿದೆ. ಅದರ ಜತೆಗೆ ಸುಳ್ಳು ಸುದ್ದಿಗಳ ವಿಜ್ರಂಬಣೆಯೂ ಆಗುತ್ತಿದೆ. ಈ ವಿಚಾರದಲ್ಲಿ ಕಾರ್ಯನಿರತ ಪತ್ರಕರ್ತರು ಎಚ್ಚರ ವಹಿಸುವ ಅಗತ್ಯವಿದೆ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಮಾತನಾಡಿ, ಪತ್ರಿಕೆ ಮತ್ತು ಸಾಹಿತ್ಯ ಬೇರೆಯಲ್ಲ. ಅಭಿವ್ಯಕ್ತಿಯ ವಿಧಾನ ಮಾತ್ರ ಬೇರೆ ಇರಬಹುದು. ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಪತ್ರಿಕೋದ್ಯಮ ಇತರ 3 ಅಂಗಗಳು ತಪ್ಪಿದಾಗ ತಿದ್ದುವ ಜತೆಗೆ ಅಲುಗಾಡಿಸುವ ಶಕ್ತಿಯೂ ಮಾಧ್ಯಮಕ್ಕಿದೆ ಎಂದರು.
ದಕ್ಷಿಣಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಮಾತನಾಡಿ, ಜಿಲ್ಲಾ ಸಂಘದಿಂದ ಸುವರ್ಣ ಸಂಭ್ರಮ ಕಾರ್ಯಕ್ರಮ ಆಯೋಜಿಸಲಾಗುವುದು. ಇದು ಎಲ್ಲ ತಾಲೂಕು ಮಟ್ಟದಲ್ಲೂ ನಡೆಯಲಿದೆ ಎಂದರು.
ಈ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಉನ್ನತ ಸಾಧನೆ ಮಾಡಿದ ಸಂಘದ ಸದಸ್ಯರ ಮಕ್ಕಳಾದ ಕೃತಿ ಕೆ., ಪುಣ್ಯಶ್ರೀ, ಸಿಹಾ ಸಮ್ರಾ ಮತ್ತು ಅವರನ್ನು ಸಂಘದ ಪರವಾಗಿ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಸನ್ಮಾನಿಸಿದರು.
ಪುತ್ತೂರು ಸಂಘದ ಅಧ್ಯಕ್ಷ ಸಿದ್ದಿಕ್ ನೀರಾಜೆ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಶಶಿಧರ ರೈ ಕುತ್ಯಾಳ, ಕೋಶಾಧಿಕಾರಿ ಸಂಶುದ್ದೀನ್ ಸಂಪ್ಯ, ಜಿಲ್ಲಾ ಸಂಘದ ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಸದಸ್ಯ ಮೇಘಾ ಪಾಲೆತ್ತಡಿ ಸ್ವಾಗತಿಸಿದರು. ಸದಸ್ಯ ಸುಧಾಕರ ಸುವರ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಶಾಧಿಕಾರಿ ಸಂಶುದ್ದೀನ್ ಸಂಪ್ಯ ಕಾರ್ಯಕ್ರಮ ನಿರೂಪಿಸಿದರು. ಸಮಾರಂಭದಲ್ಲಿ ಸಂಘದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.
























