ಜ್ವಲಂತ ಸಮಸ್ಯೆಗಳಿಂದ ಗಮನ ತಿರುಗಿಸುವ ತಂತ್ರ ಎಂದು ಬಿಜೆಪಿ ಟೀಕೆ
ಬೆಂಗಳೂರು : ಈಗಾಗಲೇ ಭಾಷೆಯ ವಿಚಾರವಾಗಿ ಹಲವು ರಾಜ್ಯಗಳಲ್ಲಿ ಹೋರಾಟ ನಡೆಯುತ್ತಿದೆ. ಇದರ ನಡುವೆ ಕರ್ನಾಟಕ ಸರ್ಕಾರ ಕನ್ನಡ ಧ್ವಜಕ್ಕೆ ಅಧಿಕೃತ ಮಾನ್ಯತೆ ಆಗ್ರಹಿಸಿ ಕೇಂದ್ರದ ಎದುರು ಕೋರಿಕೆ ಮಂಡಿಸಿದೆ.
ಹಳದಿ-ಕೆಂಪು ಬಾವುಟಕ್ಕೆ ಅಧಿಕೃತ ಮಾನ್ಯತೆ ಕೊಡುವಂತೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. 2017ರಲ್ಲೇ ಬಾವುಟ ಅಧಿಕೃತ ಕೋರಿ ಕೇಂದ್ರಕ್ಕೆ ಅಂದಿನ ಸಿದ್ದರಾಮಯ್ಯ ಸರ್ಕಾರ ಮನವಿ ಸಲ್ಲಿಸಿತ್ತು. ಇದೀಗ ಮತ್ತೊಮ್ಮೆ ಪತ್ರ ಬರೆಯುವ ಮೂಲಕ ಕೇಂದ್ರದ ಮೇಲೆ ಒತ್ತಡ ಹೇರಿದೆ.
ಶೀಘ್ರದಲ್ಲೇ ತಂಗಡಗಿ ನೇತೃತ್ವದ ನಿಯೋಗ ದೆಹಲಿಗೆ ತೆರಳಲಿದ್ದು, ಕೇಂದ್ರದ ಸಂಸ್ಕೃತಿ ಸಚಿವರ ಭೇಟಿ ಮಾಡಲಿದೆ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಬರೀ ಹೆಸರಿಗೆ ಮಾತ್ರ ಇದೆ. ಈಗಿರುವ ಕನ್ನಡದ ಬಾವುಟ ಅಧಿಕೃತ ಅಲ್ಲ. ಅದೇ ಬಾವುಟ ಅಧಿಕೃತಗೊಳಿಸಿ ಎಂದು ಕೇಂದ್ರಕ್ಕೆ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.
ಕನ್ನಡ ಬಾವುಟಕ್ಕೆ ಒಪ್ಪಿಗೆ ಕೋರಿ ಕೇಂದ್ರಕ್ಕೆ ಪತ್ರ ಬರೆದಿದ್ದೇನೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಶೋಭಾ ಕರಂದ್ಲಾಜೆ ಮಾತಾಡುತ್ತಾರೆ. ದಯಮಾಡಿ ಕೇಂದ್ರದಿಂದ ಕನ್ನಡ ಬಾವುಟಕ್ಕೆ ಒಪ್ಪಿಗೆ ಕೊಡಿಸಲಿ. ಶಾಸ್ತ್ರೀಯ ಸ್ಥಾನಮಾನ ವಿಚಾರದಲ್ಲಿ ಅನುದಾನ ಕೊಡಿಸಲಿ. ತಮಿಳುನಾಡಿಗೆ ಹೆಚ್ಚಿನ ಅನುದಾನ ನೀಡಲಾಗುತ್ತದೆ. ಆದರೆ ಕನ್ನಡಕ್ಕಿಲ್ಲ. ಜುಲೈ ಅಂತ್ಯ ವೇಳೆಗೆ ನಿಯೋಗದ ಜತೆ ಕೇಂದ್ರದ ಮಂತ್ರಿಗಳನ್ನು ಭೇಟಿ ಮಾಡಿ ಅನುದಾನಕ್ಕೆ ಮನವಿ ಮಾಡುತ್ತೇವೆ ಎಂದಿದ್ದಾರೆ.
ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಸರ್ಕಾರದ ಈಗಿನ ನಡೆಯನ್ನು ಗಮನ ತಿರುಗಿಸು ತಂತ್ರ ಎಂದು ಟೀಕಿಸಿದ್ದಾರೆ. ನಾವು ಕನ್ನಡದ ವಿರೋಧಿಗಳಲ್ಲ. ಕಾಂಗ್ರೆಸ್‌ಗಿಂತ ಜಾಸ್ತಿ ಹೋರಾಟ ನಾನು ಮಾಡಿದ್ದೇನೆ. ಗೋಕಾಕ್ ಚಳವಳಿಯಲ್ಲಿ ನಾನೂ ಭಾಗಿಯಾಗಿ ಲಾಠಿ ಏಟು ತಿಂದಿದ್ದೇನೆ. ಕನ್ನಡ ನೆಲ, ಜಲ, ಭಾಷೆಯ ವಿಚಾರವಾಗಿ ನಾವು ಏನು ಮಾಡಿದ್ದೇವೆ ಎಂದು ಆತ್ಮಸಾಕ್ಷಿಯಾಗಿ ಪ್ರಶ್ನೆ ಮಾಡಿಕೊಂಡು ಆಮೇಲೆ ಮುಂದೆ ಹೋಗಲಿ. ಎಸ್ಎಸ್ಎಲ್ಸಿ ಕನ್ನಡ ಭಾಷೆಯ ಅಂಕ ಕಡಿತ ಮಾಡಿ, ಧ್ವಜ ಅಂತ ಹೋದರೆ ಹೇಗೆ? ರಾಜ್ಯದಲ್ಲಿ ಅಭಿವೃದ್ಧಿ ಆಗಿಲ್ಲ, ಗಮನ ಬೇರೆಡೆ ಸೆಳೆಯಲು ಕನ್ನಡ ಧ್ವಜದ ವಿಚಾರ ತಂದಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.
























