ಜುಲೈ 1ರಿಂದ ಡಿಸೆಂಬರ್ 12ರವರೆಗೆ ಮುಷ್ಕರ ನಿರ್ಬಂಧಿಸಿ ಕೆಎಸ್‌ಆರ್‌ಟಿಸಿ ಅಧಿಸೂಚನೆ
ಬೆಂಗಳೂರು : ಆಗಸ್ಟ್ 5ರಂದು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾಗಿರುವ ಕೆಎಸ್‌ಆರ್‌ಟಿಸಿ ಸಾರಿಗೆ ನೌಕರರ ವಿರುದ್ಧ ಸರ್ಕಾರ ಕರ್ನಾಟಕ ಅಗತ್ಯ ಸೇವಾ ನಿರ್ವಹಣಾ ಕಾಯಿದೆ 2013 ಅಡಿ (ಎಸ್ಮಾ) ಕಾಯಿದೆ ಜಾರಿ ಮಾಡಿ ಎಚ್ಚರಿಕೆ ನೀಡಿದೆ. ಈ ಕಾಯಿದೆಯಡಿ ಆರು ತಿಂಗಳು ನೌಕರರು ಯಾವುದೇ ಮುಷ್ಕರದಲ್ಲಿ ಭಾಗಿಯಾಗುವಂತಿಲ್ಲ. ಜುಲೈ 1ರಿಂದ ಡಿಸೆಂಬರ್ 12ರವರೆಗೆ ನಿಗಮದಲ್ಲಿ ಮುಷ್ಕರ ನಿರ್ಬಂಧಿಸಿ ಕೆಎಸ್‌ಆರ್‌ಟಿಸಿ ಕಾರ್ಮಿಕ ಇಲಾಖೆ ಅಧಿಸೂಚನೆ ಹೊರಡಿಸಿದೆ.
ತಮ್ಮ ಬೇಡಿಕೆ ಈಡೇರಿಕೆಗಾಗಿ ಸರ್ಕಾರದ ಬಾಗಿಲು ಬಡಿದು ಸುಸ್ತಾದ ಕೆಎಸ್‌ಆರ್‌ಟಿಸಿ ಮತ್ತು ಬಿಎಂಆರ್ಟಿಸಿ ಸೇರಿದಂತೆ ನಾಲ್ಕು ಸಾರಿಗೆ ನಿಗಮದ ಸಿಬ್ಬಂದಿ ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ. ಆಗಸ್ಟ್ 5ರಿಂದ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಲಾಗಿದೆ. ಆದರೆ ಇದೀಗ ಸಾರಿಗೆ ನೌಕರರಿಗೆ ಕೆಎಸ್‌ಆರ್‌ಟಿಸಿ ಶಾಕ್ ನೀಡಿದ್ದು, ಪ್ರತಿಭಟನೆ ನಡೆಸದಂತೆ ಕಾರ್ಮಿಕ ಇಲಾಖೆ ಎಸ್ಮಾ ಜಾರಿ ಮಾಡಿದೆ.
ಎಸ್ಮಾ ಅಂದರೆ ಅಗತ್ಯ ಸೇವೆ ನಿರ್ವಹಣೆ ಕಾಯ್ದೆ ಎಂದರ್ಥ (Essential Services Maintenance Act). ಸರ್ಕಾರಿ ನೌಕರನನ್ನು ನಿಯಂತ್ರಣ ಮಾಡುವ ಕಾಯ್ದೆ 1968ರಿಂದ ಚಾಲ್ತಿಯಲ್ಲಿದೆ. 1994ರಲ್ಲಿ ಕರ್ನಾಟಕದಲ್ಲಿ ಎಸ್ಮಾ ಕುರಿತು ಕಾನೂನಿನ ರೂಪುರೇಷೆ ಸಿದ್ಧಪಡಿಸಲಾಗಿದೆ. ಈ ಕಾಯ್ದೆಯಲ್ಲಿ ಒಟ್ಟು 9 ಸೆಕ್ಷನ್ಗಳಿವೆ.
ಸೆಕ್ಷನ್ 2ರ ಪ್ರಕಾರ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ಸಾರಿಗೆ ಸಂಸ್ಥೆಗಳ ಮೇಲೆ ಸರ್ಕಾರ ಎಸ್ಮಾ ಜಾರಿ ಮಾಡಬಹುದಾಗಿದೆ. ಸೆಕ್ಷನ್ 3ರ ಪ್ರಕಾರ ಸಂಸ್ಥೆಗಳು ಮುಷ್ಕರ ನಡೆಸದಂತೆ ಸರ್ಕಾರ ಆದೇಶ ಹೊರಡಿಸಬಹುದು. ಒಮ್ಮೆ ಆದೇಶ ಹೊರಡಿಸಿದರೆ ಅದು 1 ವರ್ಷ ಕಾಲ ಊರ್ಜಿತದಲ್ಲಿ ಇರಲಿದ್ದು, ಈ ಸಂದರ್ಭದಲ್ಲಿ ಯಾವುದೇ ನೌಕರರು ಅಥವಾ ಸಂಘಟನೆ ಮುಷ್ಕರ ನಡೆಸಿದರೆ ಅದು ಕಾನೂನುಬಾಹಿರವಾಗುವುದು.
























