ನೆಲ್ಯಾಡಿ: ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಸೌತಡ್ಕ ಬಳಿಯ ಮುರತ್ತಮೇಲ್ ಎಂಬಲ್ಲಿ ಆನೆಯೊಂದು ವ್ಯಕ್ತಿ ಮೇಲೆ ದಾಳಿ ಮಾಡಿದ ಪರಿಣಾಮ ವ್ಯಕ್ತಿ ಮೃತಪಟ್ಟ ಘಟನೆ ಇಂದು ಬೆಳಿಗ್ಗೆ ನಡೆದಿದೆ.
ಮುರತ್ತಮೇಲ್ ನಿವಾಸಿ ಬಾಲಕೃಷ್ಣ ಶೆಟ್ಟಿ (60) ಮೃತಪಟ್ಟವರು ಎಂದು ಗುರುತಿಸಲಾಗಿದೆ.
ಎರಡು ಆನೆಗಳು ಜತೆಯಾಗಿ ಸಾಗಿ ಬರುತ್ತಿದ್ದ ಸಂದರ್ಭ ದಾಳಿ ನಡೆದಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಸೌತಡ್ಕ ದೇವಸ್ಥಾನದಿಂದ ಕೇವಲ ಒಂದು ಕಿ.ಮೀ.ನಷ್ಟು ದೂರದಲ್ಲಿ ಈ ದುರ್ಘಟನೆ ಸಂಭವಿಸಿದೆ. ಬಾಲಕೃಷ್ಣ ಶೆಟ್ಟಿ ಅವರು ಸೌತಡ್ಕ ಸಮೀಪ ಅಂಗಡಿ ಹೊಂದಿದ್ದು ವ್ಯಾಪಾರ ನಡೆಸುತ್ತಿದ್ದರು. ಗುರುವಾರ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ಆನೆಗಳು ಎರಗಿವೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ. ಮೃತರಿಗೆ ಪತ್ನಿ, ಒಂದು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
ಘಟನಾ ಸ್ಥಳಕ್ಕೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ಬಯ್ಯ ನಾಯ್ಕ್ö, ಪ್ರೊಬೆಷನರಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಸ್ತಾ ಶೆಟ್ಟಿ, ವಲಯ ಅರಣ್ಯ ಅಧಿಕಾರಿ ರಾಘವೇಂದ್ರ, ಉಪ ವಲಯ ಅರಣ್ಯಾಧಿಕಾರಿ ಸೇರಿದಂತೆ ಇಲಾಖೆಯ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
























