ಒಪ್ಪಂದದಂತೆ ಸಿದ್ಧರಾಮಯ್ಯ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡದಿದ್ದರೆ ಡಿ.ಕೆ.ಶಿ. ಬಲವಂತವಾಗಿ ಎಳೆದುಕೊಳ್ಳುತ್ತಾರೆ: ಜನಾರ್ದನ ರೆಡ್ಡಿ

ಸವಣೂರು: ಮುಖ್ಯಮಂತ್ರಿ ಅಧಿಕಾರ ಸಂದರ್ಭ ಹೈಕಮಾಂಡ್ ಉಪಸ್ಥಿತಿಯಲ್ಲಿ ನಡೆದ 50:50 ರಂತೆ ಮಾಡಿಕೊಂಡ ಒಪ್ಪಂದದಂತೆ ಸಿದ್ಧರಾಮಯ್ಯ ಅವರು ರಾಜಿನಾಮೆ ಕೊಟ್ಟು ಡಿ.ಕೆ.ಶಿ. ಅವರಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುತ್ತಾರೆ. ಒಂದು ವೇಳೆ ಸೀಟು ಬಿಟ್ಟು ಕೊಡದಿದ್ದರೆ ಡಿ.ಕೆ.ಶಿ.ಯವರು ಬಲವಂತವಾಗಿ ಕುರ್ಚಿಯನ್ನು ಎಳೆದುಕೊಳ್ಳುತ್ತಾರೆ. ಅಧಿಕಾರ ಪಡೆಯುವಲ್ಲಿ ಡಿಕೆಶಿ ಆತುರದಲ್ಲಿದ್ದಾರೆ ಎಂದು ಮಾಜಿ ಸಚಿವ, ಗಂ ಗಾವತಿ ಶಾಸಕರಾದ ಗಾಲಿ ಜನಾರ್ದನ ರೆಡ್ಡಿ ಹೇಳಿದ್ದಾರೆ.

ಅರೇಲ್ತಡಿ ಇರುವೆರ್ ಉಳ್ಳಾಕುಲು ಮತ್ತು ಕೆಡೆಂಜೋಡಿತ್ತಾಯಿ ದೈವಸ್ಥಾನಕ್ಕೆ ಬುಧವಾರ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ಅವರು ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇವರಾಜ ಅರಸು ಅವರು ಅತಿ ಹೆಚ್ಚು ಅವಧಿ ಮುಖ್ಯಮಂತ್ರಿಗಳಾಗಿದ್ದವರು. ಅವರಿಗಿಂತ ಒಂದು ದಿನವಾದರೂ ಹೆಚ್ಚು ನಾನು ಅಧಿಕಾರದಲ್ಲಿರಬೇಕು ಮತ್ತು ಅನಂತರ ಸೀಟು ಬಿಟ್ಟು ಕೊಡುತ್ತೇನೆ ಎಂದು ಹೈಕಮಾಂಡ್ ಮುಂದೆ ಒಪ್ಪಂದ ರೀತಿಯಲ್ಲಿ ಮಾಡಿಕೊಂಡು ಡಿ.ಕೆ.ಶಿ. ಹಾಗೂ ಸಿದ್ಧರಾಮಯ್ಯ ಅಧಿಕಾರ ಹಂಚಿಕೊಂಡಿದ್ದಾರೆ ಎಂದು ಸಂಡೂರು ಉಪ ಚುನಾವಣೆ ಸಂದರ್ಭದಲ್ಲೇ ನಾನು ಹೇಳಿದ್ದೇನೆ ಎಂದು ರೆಡ್ಡಿ ಹೇಳಿದರು.

ಒಪ್ಪಂದಂತೆ ಈಗಿನಿಂದಲೇ ಒತ್ತಡದ ಮೂಲಕ ಬುನಾದಿ ಹಾಕುವುದನ್ನು ಡಿ.ಕೆ.ಶಿ. ಆರಂಭಿಸಿದ್ದಾರೆ. ದೇವರಾಜ ಅರಸು ಮುಖ್ಯಮಂತ್ರಿ ಆಗಿದ್ದಕ್ಕಿಂತ ಒಂದು ದಿನ ಹೆಚ್ಚು ಆದಾಗ ಸಿದ್ಧರಾಮಯ್ಯ ಅವರು ಡಿ.ಕೆ.ಶಿ.ಗೆ ಅಧಿಕಾರ ಬಿಟ್ಟುಕೊಡುತ್ತಾರೆ ಎಂದು ಹೇಳಿದರು.





















































 
 

ರಾಜಕೀಯವಾಗಿ ಆರೋಪ ಮಾಡುವ ವ್ಯಕ್ತಿತ್ವ ನನ್ನದಲ್ಲ. ಒಬ್ಬ ಸಾಮಾನ್ಯ ಪ್ರಜೆಯಾಗಿ ನೋಡಿದಾಗಲೂ ಇಡೀ ಕರ್ನಾಟಕದಲ್ಲಿ ಅಭಿವೃದ್ಧಿ ಕೆಲಸಗಳು ಕುಂಠಿತಗೊಂಡಿರುವುದು ಕಾಣಿಸುತ್ತಿದೆ. ಕಲ್ಯಾಣ ಕರ್ನಾಟಕ್ಕಾದರೂ ವಿಶೇಷ ಅನುದಾನ ಎಂದು ಸಿಗುತ್ತಿದೆ. ಆದರೆ ಉಳಿದ ಶಾಸಕರುಗಳಿಗೆ ಯಾವುದೇ ಅನುದಾನ ಸಿಗುತ್ತಿಲ್ಲ. ಗ್ಯಾರಂಟಿ ಹೆಸರಿನಲ್ಲಿ ಗ್ಯಾರಂಟಿಯನ್ನೂ ಕೊಡುತ್ತಿಲ್ಲ, ವಿಪರೀತ ಬೆಲೆ ಏರಿಕೆ ಮಾಡಲಾಗುತ್ತಿದೆ. ಫಬ್ರವರಿ ತಿಂಗಳಿನಿಂದ ಗೃಹಲಕ್ಷ್ಮೀ ಹಣ ನೀಡಿಲ್ಲ. ಒಂದು ಚುನಾವಣೆ ಬಂದರೆ ಓಟಿಗಾಗಿ ಒಮ್ಮೆ ಹಣ ಬಿಡುಗಡೆ ಮಾಡುತ್ತಾರೆ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್‌ನವರ ಮೇಲೆ ಜನರು ವಿಶ್ವಾಸ ಕಳೆದುಕೊಂಡಿದ್ದಾರೆ. ಮುಂದೆ ಬಹುದೊಡ್ಡ ಮೆಜಾರಿಟಿಯಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಮುಂದಿನ ದಿನಗಳಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಕರ್ನಾಟಕ ರಾಜ್ಯದಲ್ಲಿ ಅತಿ ಹೆಚ್ಚು ಬಹುಮತದ ಸರಕಾರ ರಚಿಸುತ್ತೇವೆ. ರಾಜ್ಯಾಧ್ಯಕ್ಷ ಸ್ಥಾನದ ಮುಂದುವರಿಕೆ, ಗೊಂದಲದ ಕುರಿತೂ ಪಕ್ಷದ ವರಿಷ್ಠರು ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಹೇಳಿದರು.

ಇದೇ ಗ್ರಾಮದ ಪಕ್ಷದ ಕಾರ್ಯಕರ್ತ ಗ್ರಾಮದ ದೈವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಬರುವಂತೆ ವಿನಂತಿಸಿದ್ದರು. ಊರಿನ ಹಲವರೂ ಬಂದು ಆಮಂತ್ರಿಸಿದ್ದರು. ಕುಟುಂಬ ಸಮೇತ ಬರುವ ಉದ್ದೇಶ ಹೊಂದಿದ್ದರೂ ಜೈಲು ಶಿಕ್ಷೆಯಾದ ಕಾರಣಕ್ಕೆ ಬರಲು ಸಾಧ್ಯವಾಗಲಿಲ್ಲ. ಆದರೆ ನಾನು ಬರದಿದ್ದರೂ ಊರಿನವರು ನನ್ನ ಪರವಾಗಿ ನೇಮದ ಸಂದರ್ಭದಲ್ಲಿ ದೈವದ ಮುಂದೆ ಪ್ರಾರ್ಥನೆ ಮಾಡಿದ್ದರು. 30 ದಿನಗಳೊಳಗೆ ಜಾಮೀನು ಲಭಿಸುವ ಅಭಯವನ್ನು ದೈವ ನೀಡಿತ್ತು. 27 ದಿನಗಳಲ್ಲಿ ನನಗೆ ಜಾಮೀನು ಲಭಿಸಿತ್ತು. ಸಂಕ್ರಮಣದ ವಿಶೇಷ ದಿನ ಆಗಿರುವ ಕಾರಣ ಬಂದು ದೈವಕ್ಕೆ ಮನಪೂರ್ವಕವಾಗಿ ಕೃತಜ್ಞತೆಯ ಪ್ರಾರ್ಥನೆ ಸಲ್ಲಿಸಲು ಬಂದಿದ್ದೇನೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ನಿಕಟಪೂರ್ವ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ವಿಧಾನ ಪರಿಷತ್ ಸದಸ್ಯ ಕಿಶೋರ್ ಪುತ್ತೂರು, ಸುಳ್ಯ ಶಾಸಕ ಭಾಗೀರಥಿ ಮುರುಳ್ಯ ಸೇರಿದಂತೆ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

error: Content is protected !!
Scroll to Top