ಬೆಂಗಳೂರು: ಸಿಗಂದೂರು ಸೇತುವೆ ಉದ್ಘಾಟನೆಯ ಆಹ್ವಾನದ ವಿಚಾರದಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗಿದೆ ಎನ್ನುವ ಸಿಎಂ ಸಿದ್ದರಾಮಯ್ಯ ಅವರ ಆರೋಪಕ್ಕೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಪ್ರತಿಕ್ರಿಯೆ ನೀಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಗಡ್ಕರಿ, ಕಾರ್ಯಕ್ರಮದಲ್ಲಿ ಯಾವ ಶಿಷ್ಟಾಚಾರವೂ ಉಲ್ಲಂಘನೆ ಆಗಿಲ್ಲ. ಸಿದ್ದರಾಮಯ್ಯ ಅವರಿಗೆ ಜುಲೈ 11 ರಂದೇ ಅಧಿಕೃತ ಆಹ್ವಾನ ನೀಡಲಾಗಿದೆ. ಜುಲೈ 12 ರಂದು ಸಿದ್ದರಾಮಯ್ಯ ಅವರಿಗೆ ಮತ್ತೊಂದು ಪತ್ರ ಬರೆಯಲಾಗಿದ್ದು, ಯಾವುದೇ ಪೂರ್ವಯೋಜಿತ ಕಾರ್ಯಕ್ರಮ ಇದ್ದರೂ ಸೇತುವೆ ಉದ್ಘಾಟನೆಗೆ ವರ್ಚುವಲ್ ರೂಪದಲ್ಲಾದರೂ ಭಾಗಿಯಾಗಿ ಎಂದು ಕೋರಲಾಗಿತ್ತು. ಆದ್ದರಿಂದ ಇಲ್ಲಿ ಯಾವುದೇ ಶಿಷ್ಟಾಚಾರದ ಉಲ್ಲಂಘನೆ ಆಗಿಲ್ಲ. ಕೇಂದ್ರ ಸರ್ಕಾರ ಗಣತಂತ್ರ ವ್ಯವಸ್ಥೆಯಲ್ಲಿ ನಂಬಿಕೆ ಹೊಂದಿದ್ದು, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಸೌಹಾರ್ದ ಸಂಬಂಧಕ್ಕೆ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.
ಗಡ್ಕರಿ ಪ್ರತಿಕ್ರಿಯೆ ಬಳಿಕ ಪ್ರಧಾನಿ ಮೋದಿ ಅವರಿಗೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದು, ತಮಗೆ ಪೂರ್ವ ನಿಗದಿತ ಕಾರ್ಯಕ್ರಮ ಇದ್ದ ಹಿನ್ನೆಲೆಯಲ್ಲಿ ಸೇತುವೆ ಉದ್ಘಾಟನೆ ಕಾರ್ಯಕ್ರಮವನ್ನು ಮುಂದೂಡುವಂತೆ ತಿಳಿಸಿದ್ದರೂ, ಕಾರ್ಯಕ್ರಮವನ್ನು ನಡೆಸಿದ್ದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರದ ಇಲಾಖೆಯ ಅಸಹಕಾರದ ಬಗ್ಗೆಯೂ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
























