ನೀರಿಗೆ ಬಿದ್ದ ಒಬ್ಬನನ್ನು ರಕ್ಷಿಸಲು ಯತ್ನಿಸಿದ ಇನ್ನಿಬ್ಬರು ನೀರುಪಾಲು
ಉಡುಪಿ: ಮೀನುಗಾರಿಕೆಗೆ ತೆರಳಿದ್ದ ನಾಡದೋಣಿ ಮಗುಚಿ ಮೂವರು ಮೀನುಗಾರರು ನೀರುಪಾಲಾಗಿರುವ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಗಂಗೊಳ್ಳಿಯಲ್ಲಿ ನಡೆದಿದೆ.
ಸುರೇಶ್ ಖಾರ್ವಿ (45), ರೋಹಿತ್ ಖಾರ್ವಿ (38) ಮತ್ತು ಜಗ್ಗು ಯಾನೆ ಜಗದೀಶ್ ಖಾರ್ವಿ (36) ನೀರುಪಾಲಾದ ಮೀನುಗಾರರು. ಅರಬ್ಬಿ ಸಮುದ್ರ ಪ್ರಕ್ಷುಬ್ಧಗೊಂಡ ಹಿನ್ನೆಲೆ ವಾಪಸ್ ಆಗುವಾಗ ದೋಣಿ ಮಗುಚಿದೆ.
ದೋಣಿ ಮಗುಚಿದ ವೇಳೆ ಓರ್ವ ನೀರಿಗೆ ಬಿದ್ದಿದ್ದಾರೆ. ಆತನನ್ನು ರಕ್ಷಿಸಲು ಮುಂದಾದ ಇನ್ನಿಬ್ಬರು ಕೂಡ ನೀರುಪಾಲಾಗಿದ್ದಾರೆ. ನೀರುಪಾಲಾದ ಮೀನುಗಾರರಿಗೆ ಸಮುದ್ರದಲ್ಲಿ ಹುಡುಕಾಟ ನಡೆಸಲಾಗುತ್ತಿದೆ.
ಈಗ ಯಾಂತ್ರಿಕ ದೋಣಿಗಳ ಮೀನುಗಾರಿಕೆಗೆ ನಿಷೇಧವಿದ್ದು, ನಾಡದೋಣಿ ಮೀನುಗಾರಿಕೆ ನಡೆಯುತ್ತಿದೆ. ಜೂನ್, ಜುಲೈ ತಿಂಗಳಲ್ಲಿ ಮೀನುಗಾರರಿಗೆ ನಾಡದೋಣಿ ಮೀನುಗಾರಿಕೆಯೇ ಜೀವನಾಧಾರವಾಗಿರುತ್ತದೆ. ಆದರೆ ಮಳೆಗಾಲದಲ್ಲಿ ಆಗಾಗ ಸಮುದ್ರ ಪ್ರಕ್ಷುಬ್ಧಗೊಳ್ಳುವುದರಿಂದ ಎಲ್ಲ ದಿನಗಳಲ್ಲಿ ಮೀನುಗಾರಿಕೆ ನಡೆಸಲು ಸಾಧ್ಯವಾಗುವುದಿಲ್ಲ.
























