ನವದೆಹಲಿ: ಭಾರತ ಮತ್ತು ನೇಪಾಳ ಗಡಿ ಉತ್ತರಾಖಂಡದ ಚಂಪಾವತ್ ಜಿಲ್ಲೆಯ ಬನ್ಬಾಸಾ ಪ್ರದೇಶದಲ್ಲಿ ಭಾರೀ ಪ್ರಮಾಣದ ಮಾದಕ ದ್ರವ್ಯವನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಮಹಿಳೆಯೊಬ್ಬಳನ್ನು ಬಂಧಿಸಿದ್ದಾರೆ.
ಇಶಾ (22) ಬಂಧಿತ ಮಹಿಳೆಯಾಗಿದ್ದು, ಕಪ್ಪು ಬಣ್ಣದ ಬ್ಯಾಗ್ ಧರಿಸಿ ಓಡಾಡುತ್ತಿದ್ದಳು. ಈಕೆಯನ್ನು ಗಮನಿಸಿದ ಗಸ್ತು ಪಡೆ ತಪಾಸಣೆ ನಡೆಸಿತ್ತು. ಬ್ಯಾಗಿನಲ್ಲಿ 2 ಪ್ಯಾಕೆಟ್ ಎಂಡಿಎಂಎ ವಶಕ್ಕೆ ಪಡೆದಿದ್ದಾರೆ. ಸುಮಾರು 10.23 ಕೋಟಿ ರೂ. ಮೌಲ್ಯದ 5.688 ಕೆ.ಜಿ. ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ.
ಬಂಧಿತ ಮಹಿಳೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಇಶಾ ಪತಿ ಮತ್ತು ಆತನ ಸ್ನೇಹಿತ ಕಳೆದ ಜೂನ್ ತಿಂಗಳಲ್ಲಿ ಡ್ರಗ್ಸ್ ತಂದಿದ್ದು, ಪೊಲೀಸರ ಕಾರ್ಯಾಚರಣೆಗೆ ಹೆದರಿ ತಾನು ಡ್ರಗ್ಸ್ ಅನ್ನು ಕಾಲುವೆಗೆ ಎಸೆಯಲು ಹೋಗುತ್ತಿದ್ದುದಾಗಿ ತಿಳಿಸಿದ್ದಾಳೆ. ಆಕೆಯ ಪತಿ ಮತ್ತು ಸಹಚರನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
























