ಪುತ್ತೂರು: ಪುತ್ತೂರು ನ್ಯಾಯಾಲಯದಲ್ಲಿ ಶನಿವಾರ ಹಮ್ಮಿಕೊಳ್ಳಲಾದ `ರಾಷ್ಟ್ರೀಯ ಲೋಕ್ ಅದಾಲತ್’ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
6 ಕೋರ್ಟ್ ಗಳಲ್ಲಿ ಬಾಕಿ ಇದ್ದ ಒಟ್ಟು 6967 ಪ್ರಕರಣಗಳಲ್ಲಿ ಅದಾಲತ್ ನಲ್ಲಿ 1512 ಪ್ರಕರಣಗಳನ್ನು ರಾಜೀ ಸಂಧಾನಕ್ಕೆ ಪ್ರಯತ್ನಿಸಲಾಗಿತ್ತು. 986 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿ ಒಟ್ಟು ಫಲಾನುಭವಿಗಳಿಗೆ ರೂ. 2,13,05,097 ಪರಿಹಾರ ಮೊತ್ತವನ್ನು ವಿತರಿಸಲು ಆದೇಶಿಸಲಾಗಿದೆ.
ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ತಾಲೂಕು ಕಾನೂನು ಸೇವಾ ಸಮಿತಿ ಪುತ್ತೂರು ಇವರ ಆಶ್ರಯದಲ್ಲಿ ಈ ಲೋಕ ಅದಾಲತ್ ನಡೆಯಿತು.
ಲೋಕ್ ಅದಾಲತ್‌ನಲ್ಲಿ ಹಣಕಾಸು ಸಂಸ್ಥೆಗಳು, ಪೊಲೀಸ್, ಆರ್.ಟಿ.ಓ., ನಗರಸಭೆ ಅಧಿಕಾರಿಗಳು, ತಹಶೀಲ್ದಾರ್, ವಕೀಲರು, ಇನ್ಸೂರೆನ್ಸ್ ಕಂಪೆನಿಗಳಿಗೆ ಸಂಬಂಧಿಸಿದಂತೆ ರಾಜೀಯಾಗಬಲ್ಲ ಅಪರಾಧಿಕ ಪ್ರಕರಣಗಳು, ಚೆಕ್ಕು ಅಮಾನ್ಯದ ಪ್ರಕರಣಗಳು, ಬ್ಯಾಂಕ್ ವಸೂಲಾತಿ ಪ್ರಕರಣಗಳು, ಮೋಟಾರು ಅಪಘಾತ ಪರಿಹಾರ ನ್ಯಾಯಾಧೀಕರಣದ ಪ್ರಕರಣಗಳು, ಕಾರ್ಮಿಕ ವಿವಾದಗಳು, ವಿದ್ಯುತ್ ಹಾಗೂ ನೀರಿನ ಶುಲ್ಕಗಳು, ವೈವಾಹಿಕ ಪ್ರಕರಣಗಳು, ಭೂಸ್ವಾಧೀನ ಪ್ರಕರಣಗಳು, ವೇತನ ಮತ್ತು ಭತ್ಯೆಗಳಿಗೆ ಸಂಬAಧಿಸಿದ ಸೇವಾ ಪ್ರಕರಣಗಳು ಹಾಗೂ ಪಿಂಚಣಿ ಪ್ರಕರಣಗಳು, ಕಂದಾಯ ಪ್ರಕರಣಗಳು, ರಾಜೀಯಾಗಬಲ್ಲ ಸಿವಿಲ್ ಮತ್ತು ಇತರೆ ಪ್ರಕರಣಗಳು ಹಾಗೂ ವ್ಯಾಜ್ಯಪೂರ್ವ ಪ್ರಕರಣಗಳನ್ನು ಇತ್ಯರ್ಥಪಡಿಸಲು ಸಂಧಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು.
ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಸರಿತಾ ಡಿ., ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಲಯದ ನ್ಯಾಯಾಧೀಶೆ ಮತ್ತು ಹೆಚ್ಚುವರಿ ಮುಖ್ಯ ನ್ಯಾಯಿಕ ದಂಡಾಧಿಕಾರಿ ಪ್ರಕೃತಿ ಕಲ್ಯಾಣ್‌ಪುರ, ಹೆಚ್ಚುವರಿ ವ್ಯವಹಾರಿಕ ನ್ಯಾಯಾಧೀಶರು ಹಾಗೂ ಜೆಎಂಎಫ್‌ಸಿ ದೇವರಾಜ್ ವೈ.ಎಚ್., ತಾಲೂಕು ಕಾನೂನು ಸೇವೆಗಳ ಸಮಿತಿ ಸದಸ್ಯ ಕಾರ್ಯದರ್ಶಿ ಹಾಗೂ ಪ್ರಧಾನ ವ್ಯವಹಾರಿಕ ನ್ಯಾಯಾಲಯದ ನ್ಯಾಯಾಧೀಶ ಶಿವಣ್ಣ ಎಚ್. ಆರ್., ಹೆಚ್ಚುವರಿ ವ್ಯವಹಾರಿಕ ನ್ಯಾಯಾಲಯದ ನ್ಯಾಯಾಧೀಶ ಯೋಗೇಂದ್ರ ಶೆಟ್ಟಿ ಅವರ ನ್ಯಾಯಾಲಯದಲ್ಲಿ ಸಂಧಾನ ಪ್ರಕ್ರಿಯೆ ನಡೆಸಲಾಯಿತು.
ಪ್ರಕರಣಗಳ ಇತ್ಯರ್ಥ
ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ೫೧ ಪ್ರಕರಣಗಳಲ್ಲಿ 7 ಪ್ರಕರಣಗಳನ್ನು ಇತ್ಯರ್ಥಪಡಿಸಿ ರೂ. ೧೭,೬೦,೦೦೦ ಪರಿಹಾರ ವಿತರಣೆಗೆ ಆದೇಶಿಲಾಗಿದೆ.
ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಲಯ ಮತ್ತು ಎಸಿಜೆಎಂನ ೩೦೦ ಪ್ರಕರಣಗಳಲ್ಲಿ 260 ಪ್ರಕರಣಗಳನ್ನು ಇತ್ಯರ್ಥಪಡಿಸಿ ರೂ.94,83,150 ಪರಿಹಾರ ವಿತರಣೆಗೆ ಆದೇಶಿಲಾಗಿದೆ.
ಹೆಚ್ಚುವರಿ ವ್ಯವಹಾರಿಕ ನ್ಯಾಯಾಧೀಶರು ಹಾಗೂ ಜೆಎಂಎಫ್‌ಸಿಯ 352ಪ್ರಕರಣಗಳಲ್ಲಿ 294 ಪ್ರಕರಣಗಳನ್ನು ಇತ್ಯರ್ಥಪಡಿಸಿ ರೂ. 13,500 ಪರಿಹಾರ ವಿತರಣೆಗೆ ಆದೇಶಿಲಾಗಿದೆ.
ಪ್ರಧಾನ ವ್ಯವಹಾರಿಕ ನ್ಯಾಯಾಲಯ ಮತ್ತು ಜೆಎಂಎಫ್‌ಸಿನ 393 ಪ್ರಕರಣಗಳಲ್ಲಿ 42 ಪ್ರಕರಣಗಳನ್ನು ಇತ್ಯರ್ಥಪಡಿಸಿ ರೂ. 44,55,016 ಪರಿಹಾರ ವಿತರಣೆಗೆ ಆದೇಶಿಸಲಾಗಿದೆ.
ಹೆಚ್ಚುವರಿ ವ್ಯವಹಾರಿಕ ನ್ಯಾಯಾಲಯ ಮತ್ತು ಜೆಎಂಎಫ್‌ಸಿಯ 146ಪ್ರಕರಣಗಳಲ್ಲಿ 133 ಪ್ರಕರಣಗಳನ್ನು ಇತ್ಯರ್ಥಪಡಿಸಿ ರೂ. 55,68,831 ಪರಿಹಾರ ವಿತರಣೆಗೆ ಆದೇಶಿಲಾಗಿದೆ.
ಎರಡನೇ ಹೆಚ್ಚುವರಿ ವ್ಯವಹಾರಿಕ ನ್ಯಾಯಾಲಯ ಮತ್ತು ಜೆಎಂಎಫ್‌ಸಿಯ 270 ಪ್ರಕರಣಗಳಲ್ಲಿ 250 ಪ್ರಕರಣಗಳನ್ನು ಇತ್ಯರ್ಥಪಡಿಸಿ ರೂ. 24,600 ಪರಿಹಾರ ವಿತರಣೆಗೆ ಆದೇಶಿಲಾಗಿದೆ.
ಸಂಧಾನಕಾರ ನ್ಯಾಯವಾದಿಗಳಾಗಿ ಮಹಮ್ಮದ್ ರಿಯಾಝ್, ಮೋಹಿನಿ, ನಝೀರಾ, ಮಿಶ್ರಿಯಾ, ವಿಶಿಕಾ ಅವರನ್ನು ನಿಯೋಜಿಸಲಾಗಿತ್ತು. ಸಂಧಾನಕಾರ ವಕೀಲರನ್ನು ವಕೀಲರ ಸಂಘದ ಅಧ್ಯಕ್ಷ ಜಗನ್ನಾಥ ರೈ ನೇಮಕ ಮಾಡಿದ್ದರು.
























