ಹಿರಿಯ ನಟ ಕೋಟ ಶ್ರೀನಿವಾಸ್‌ ರಾವ್‌ ನಿಧನ

ಕನ್ನಡ ಸೇರಿ ವಿವಿಧ ಭಾಷೆಗಳ 750ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದ ನಟ

ಹೈದರಾಬಾದ್‌: ತೆಲುಗಿನ ಖ್ಯಾತ ನಟ ಕೋಟ ಶ್ರೀನಿವಾಸ ರಾವ್ (83) ಭಾನುವಾರ ಬೆಳಗಿನ ಜಾವ ನಿಧನರಾದರು. ಕಳೆದ ಕೆಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಹೈದರಾಬಾದ್​ನಲ್ಲಿ ಇರುವ ತಮ್ಮ ನಿವಾಸದಲ್ಲಿ ಕೊನೆಯುಸಿರು ಎಳೆದರು. ವೃದ್ಧಾಪ್ಯದಿಂದಾಗಿ ನಡೆಯಲು ಸಾಧ್ಯವಾಗದಿದ್ದರೂ ಎರಡು ವರ್ಷಗಳ ಹಿಂದಿನವರೆಗೂ ಸಿನಿಮಾಗಳಲ್ಲಿ ನಟಿಸುವುದನ್ನು ಮುಂದುವರಿಸಿದ್ದರು. ಅವರ ಕೊನೆಯ ಚಿತ್ರ 2023ರಲ್ಲಿ ಬಿಡುಗಡೆಯಾದ ‘ಸುವರ್ಣ ಸುಂದರಿ’. ಕೋಟ ಶ್ರೀನಿವಾಸ ರಾವ್ ಅವರು 750ಕ್ಕೂ ಅಧಿಕ ಸಿನಮಾಗಳಲ್ಲಿ ನಟಿಸಿದ್ದರು. ಪದ್ಮಶ್ರೀ ಸಹಿತ ಅನೇಕ ಪ್ರಶಸ್ತಿ, ಪುರಸ್ಕಾರಗಳಿಂದ ಸನ್ಮಾನಿತರಾಗಿದ್ದರು.

ಕಳೆದ 4 ದಶಕಗಳ ತಮ್ಮ ವೃತ್ತಿಜೀವನದಲ್ಲಿ ಕೋಟ ಶ್ರೀನಿವಾಸ ರಾವ್ ಅನೇಕ ಬಗೆಯ ಪಾತ್ರಗಳನ್ನು ನಿರ್ವಹಿಸಿ ಸೈ ಎನಿಸಿಕೊಂಡಿದ್ದರು. ಶ್ರೀನಿವಾಸ ರಾವ್ ಅವರು 1942ರ ಜುಲೈ 10ರಂದು ಕೃಷ್ಣ ಜಿಲ್ಲೆಯ ಕಂಕಿಪಡುವಿನಲ್ಲಿ ಜನಿಸಿದರು. ಅವರ ತಂದೆ ಡಾ. ಸೀತಾರಾಮಾಂಜನೇಯುಲು. ಬಾಲ್ಯದಲ್ಲಿ ತಂದೆಯಂತೆ ವೈದ್ಯನಾಗಬೇಕೆಂದು ಬಯಸಿದ್ದರೂ, ಶಾಲಾ ದಿನಗಳಲ್ಲಿ ನಾಟಕಗಳಲ್ಲಿ ಕಾಣಿಸಿಕೊಂಡ ನಂತರ ನಟನೆಯಲ್ಲಿ ಆಸಕ್ತಿ ಬೆಳೆಸಿಕೊಂಡು ನಟನೆಯನ್ನು ತಮ್ಮ ವೃತ್ತಿಯನ್ನಾಗಿ ಮಾಡಿಕೊಂಡರು.





















































 
 

ತೆಲುಗು ಮಾತ್ರವಲ್ಲದೆ ತಮಿಳು, ಹಿಂದಿ, ಕನ್ನಡ ಮತ್ತು ಮಲಯಾಳಂ ಸಿನಿಮಾಗಳಲ್ಲಿ ಕೂಡ ಕೋಟ ಶ್ರೀನಿವಾಸ ರಾವ್ ನಟಿಸಿದ್ದರು. ವಿಲನ್ ಪಾತ್ರ, ಹಾಸ್ಯ ಪಾತ್ರ ಸೇರಿದಂತೆ ಹಲವು ಬಗೆಯಲ್ಲಿ ಅವರು ಜನರನ್ನು ರಂಜಿಸಿದ್ದರು. ಪದವಿ ಶಿಕ್ಷಣ ಪಡೆದ ನಂತರ ಅವರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕೆಲಸ ಸಿಕ್ಕಿತ್ತು.

ಕೋಟ ಶ್ರೀನಿವಾಸ ರಾವ್ ಅವರ ಪತ್ನಿ ರುಕ್ಮಿಣಿ. ದಂಪತಿಗೆ ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗನಿದ್ದಾರೆ. ಕೋಟ ಶ್ರೀನಿವಾಸ್ ಅವರ ಮಗ ಕೋಟ ವೆಂಕಟ ಆಂಜನೇಯ ಪ್ರಸಾದ್ ಅವರು ಚಿತ್ರರಂಗಕ್ಕೆ ಪ್ರವೇಶಿಸುವ ಹಂತದಲ್ಲಿದ್ದಾಗ ಅಪಘಾತದಲ್ಲಿ ಪ್ರಾಣ ಕಳೆದುಕೊಂಡರು. ಮಗನ ಅಕಾಲಿಕ ಮರಣದಿಂದ ಅವರು ತೀವ್ರ ಆಘಾತಕ್ಕೊಳಗಾಗಿದ್ದರು. ಶ್ರೀನಿವಾಸ ರಾವ್ ಅವರ ಕಿರಿಯ ಸಹೋದರ ಶಂಕರ್ ರಾವ್ ಕೂಡ ನಟ.

ಕೋಟ ಶ್ರೀನಿವಾಸ್ ರಾವ್ ಅವರು ಕೇವಲ ನಟರಲ್ಲ. ರಾಜಕೀಯಕ್ಕೂ ಪ್ರವೇಶಿಸಿ ಯಶಸ್ಸು ಕಂಡಿದ್ದರು. 1999ರಿಂದ 2004ರವರೆಗೆ ವಿಜಯವಾಡ ಪೂರ್ವ ಕ್ಷೇತ್ರದ ಶಾಸಕರಾಗಿ ಸೇವೆ ಸಲ್ಲಿಸಿದ್ದರು. ಕನ್ನಡದ ಲೇಡಿ ಕಮಿಷನರ್, ರಕ್ತ ಕಣ್ಣೀರು, ಲವ್, ನಮ್ಮ ಬಸವ, ನಮ್ಮಣ್ಣ, ಶ್ರೀಮತಿ, ಕಬ್ಜಾ ಮುಂತಾದ ಸಿನಿಮಾಗಳಲ್ಲಿ ಅವರು ನಟಿಸಿದ್ದರು.

error: Content is protected !!
Scroll to Top