ವೈದ್ಯನಿಂದಲೇ ಡ್ರಗ್ಸ್‌ ದಂಧೆ : ಬೃಹತ್‌ ಮಾದಕ ವಸ್ತು ಜಾಲ ಬಯಲಿಗೆಳೆದ ಮಂಗಳೂರು ಪೊಲೀಸರು

ವಿದ್ಯಾರ್ಥಿಗಳಿಗೆ ಮಾದಕ ವಸ್ತು ಪೂರೈಸುತ್ತಿದ್ದ ಡಾಕ್ಟರ್‌

ಮಂಗಳೂರು: ಕೆಲದಿನಗಳ ಹಿಂದೆಯಷ್ಟೇ ಉಗ್ರನಿಗೆ ನೆರವು ನೀಡಿದ ಆರೋಪದಲ್ಲಿ ಮನೋವ್ಯದ್ಯ ಸೆರೆಯಾಗಿದ್ದ. ಇದೀಗ ಮಂಗಳೂರಿನಲ್ಲಿ ವಿದ್ಯಾರ್ಥಿಗಳಿಗೆ ಡ್ರಗ್ಸ್‌ ಪೂರೈಸಿದ ಆರೋಪದಲ್ಲಿ ವೈದ್ಯನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಡ್ರಗ್ಸ್ ಜಾಲದ ವಿರುದ್ಧ ಭರ್ಜರಿ ಕಾರ್ಯಾಚರಣೆ ನಡೆಸಿರುವ ಪೊಲೀಸರು ಬೀದರ್ ಮೂಲದ ವೈದ್ಯನನ್ನು ಬಂಧಿಸಿದ್ದಾರೆ.

ವೈದ್ಯ ಬಂಧನದ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯ ಡ್ರಗ್ಸ್ ಜಾಲಕ್ಕೆ ಸಂಬಂಧಿಸಿದ ಅನೇಕ ಸ್ಫೋಟಕ ಮಾಹಿತಿಗಳು ಬೆಳಕಿಗೆ ಬಂದಿವೆ. ಬೀದರ್ ಮೂಲದ, ಪ್ರಸ್ತುತ ಬೆಂಗಳೂರಿನ ಕೋಡಿಪಾಳ್ಯ ನಿವಾಸಿಯಾಗಿರುವ ಪ್ರಜ್ವಲ್ ಪೀಣ್ಯಾಸ್ಬಂಧಿತ ವೈದ್ಯ. ಪ್ರಜ್ವಲ್ ಪೀಣ್ಯಾಸ್ ಹಾಗೂ ಇತರ ಪೆಡ್ಲರ್​​ಗಳು ವಿದ್ಯಾರ್ಥಿಗಳನ್ನೇ ಗುರಿಯಾಗಿಸಿಕೊಂಡು ಡ್ರಗ್ಸ್ ಪೂರೈಕೆ ಮಾಡುತ್ತಿದ್ದರು. ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದಿಂದ ಮಂಗಳೂರಿಗೆ ಡ್ರಗ್ಸ್ ಪೂರೈಕೆಯಾಗುತ್ತಿರುವ ಬಗ್ಗೆ ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.





















































 
 

ಡ್ರಗ್ಸ್ ಜಾಲದ ಬೆನ್ನುಬಿದ್ದ ಮಂಗಳೂರು ಪೊಲೀಸರು 6 ಆರೋಪಿಗಳನ್ನು ಬಂಧಿಸಿದ್ದರು. ಬಂಧಿತರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ ವೇಳೆ ವೈದ್ಯ ಪ್ರಜ್ವಲ್ ಪೀಣ್ಯಾಸ್ ಕಿಂಗ್​ಪಿನ್ ಎಂಬುದು ಗೊತ್ತಾಗಿದೆ. ವೈದ್ಯ ಪ್ರಜ್ವಲ್ ಪೀಣ್ಯಾಸ್ ಈ ಹಿಂದೆ ಮಂಗಳೂರಿನ ಫಾದರ್ ಮುಲ್ಲರ್ಸ್ ಕಾಲೇಜಿನಲ್ಲಿ ವೈದ್ಯಕೀಯ ವಿದ್ಯಾರ್ಥಿಯಾಗಿದ್ದ. ಮಂಗಳೂರು ನಗರದ ವಿವಿಧ ಠಾಣೆಗಳಲ್ಲಿ ಡ್ರಗ್ಸ್ ಪೂರೈಕೆ ಹಿನ್ನಲೆ ದಾಖಲಾಗಿದ್ದ ಮೂರು ಪ್ರಕರಣಗಳ ಜಾಡು ಹಿಡಿದಾಗ ಪ್ರಜ್ವಲ್ ಪೀಣ್ಯಾಸ್ ಕರ್ಮಕಾಂಡ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಈವರೆಗೆ ಒಟ್ಟು 9 ಆರೋಪಿಗಳನ್ನು ಬಂಧಿಸಲಾಗಿದೆ.

ಮಂಗಳೂರಿನಲ್ಲಿ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಆರು ಜನರ ಬಂಧನವಾಗಿತ್ತು. ಹೊರರಾಜ್ಯ ಹಾಗೂ ಹೊರಜಿಲ್ಲೆಗಳಿಂದ ಮಂಗಳೂರಿಗೆ ಈ ಜಾಲ ಡ್ರಗ್ಸ್ ಪೂರೈಕೆ ಮಾಡುತ್ತಿತ್ತು. ಮಹಾರಾಷ್ಟ್ರಕ್ಕೆ ಸೇರಿದ ಇಬ್ಬರು ಮಧ್ಯಪ್ರದೇಶಕ್ಕೆ ಸೇರಿದ ಒಬ್ಬನನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು. ಬೀದರ್ ಮೂಲದ ವೈದ್ಯನನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಮಾಹಿತಿ ನೀಡಿದ್ದಾರೆ.

ಕೆಲವು ದಿನಗಳ ಹಿಂದಷ್ಟೇ ಮಕ್ಕಳು ಡ್ರಗ್ಸ್ ಅಡಿಕ್ಷನ್​ಗೆ ಒಳಗಾಗಿದ್ದಾರೆ ಎಂದು ಪೋಷಕರೇ ಪೊಲೀಸರಿಗೆ ದೂರು ನೀಡಿದ ಅಚ್ಚರಿಯ ವಿದ್ಯಮಾನ ಮಂಗಳೂರಿನಲ್ಲಿ ನಡೆದಿತ್ತು. ನಂತರ ಕಾರ್ಯಾಚರಣೆ ನಡೆಸಿದ್ದ ಪೊಲೀಸರು ನೂರಾರು ವಿದ್ಯಾರ್ಥಿಗಳಿಗೆ, ಮಕ್ಕಳಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಜಾಲವನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದರು.

error: Content is protected !!
Scroll to Top