ಮಂಗಳೂರು: ನಗರದಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿರುವ ಮುಹಮ್ಮದ್ ಅಸ್ಕರ್ ಎಂಬಾತನಿಗೆ ಮಾದಕ ವಸ್ತು ಎಂಡಿಎಂಎ ಪೂರೈಕೆ ಮಾಡಿದ ಆರೋಪದಲ್ಲಿ ಮಹಿಳೆಯೊಬ್ಬಳ ವಿರುದ್ಧ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜು.10ರಂದು ಮಧ್ಯಾಹ್ನ ಸಂದರ್ಶಕಿಯಾಗಿ ರಮ್ಸೂನಾ ಎಂಬಾಕೆ ಬಂದಿದ್ದು, ಆಕೆ ಮುಹಮ್ಮದ್ ಅಸ್ಕರ್‌ಗೆ ನೀಡಲು ಬೇಕರಿ ತಿಂಡಿಗಳನ್ನು ಕೊಂಡೊಯ್ದಿದ್ದಳು. ಇದನ್ನು ಸಿಬ್ಬಂದಿ ಪರಿಶೀಲಿಸಿದಾಗ 5 ಸಣ್ಣ ಪೊಟ್ಟಣಗಳು ಕಂಡು ಬಂದಿವೆ. ಈ ಬಗ್ಗೆ ಸಿಬ್ಬಂದಿ ಆಕೆಯನ್ನು ವಿಚಾರಿಸಿದಾಗ ಹೊಸಂಗಡಿಯ ಹುಸೇನ್ ಎಂಬಾತ ಕೆಲವು ಪೊಟ್ಟಣಗಳನ್ನು ಕೊಟ್ಟಿದ್ದಾನೆ. ಅದನ್ನು ತಂದು ಕೊಡಬೇಕು ಎಂದು ಮುಹಮ್ಮದ್ ಅಸ್ಕರ್ ಈ ಹಿಂದೆ ತಿಳಿಸಿದ್ದ, ಅದರಂತೆ ತಾನು ತಂದಿರುವುದಾಗಿ ಹೇಳಿದ್ದಾಳೆ.
ಈ ಬಗ್ಗೆ ಜೈಲು ಅಧೀಕ್ಷಕ ಶರಣ ಬಸಪ್ಪ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿರುವ ಬರ್ಕೆ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ.
























