ಮಗಳ ದುಡಿಮೆಯಲ್ಲಿ ಬದುಕುತ್ತಿದ್ದಾನೆ ಎಂಬ ಕುಹಕಕ್ಕೆ ಬೇಸತ್ತು ಕೃತ್ಯ
ನವದೆಹಲಿ: ರಾಷ್ಟ್ರೀಯ ಟೆನ್ನಿಸ್ ಆಟಗಾರ್ತಿಯನ್ನು ಅವರ ತಂದೆಯ ಗುಂಡಿಕ್ಕಿ ಕೊಂದಿರುವ ಆಘಾತಕಾರಿ ಘಟನೆ ಗುರುಗಾಂವ್ನಲ್ಲಿ ಸಂಭವಿಸಿದೆ. ರಾಧಿಕಾ ಯಾದವ್ (25) ಅವರನ್ನು ತಂದೆ ದೀಪಕ್ ಯಾದವ್ ಗುಂಡಿಕ್ಕಿ ಸಾಯಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಊರಿನ ಜನ ಮಗಳ ದುಡಿಮೆಯಲ್ಲಿ ಬದುಕುತ್ತಿದ್ದಾನೆ ಎಂದು ಜನರು ಕುಹಕವಾಡುತ್ತಿರುವುದರಿಂದ ಬೇಸತ್ತು ಆತ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.
ರಾಧಿಕಾ ಯಾದವ್ ಟೆನ್ನಿಸ್ ಅಕಾಡೆಮಿಯೊಂದನ್ನು ನಡೆಸುತ್ತಿದ್ದು, ಊರವರ ಚುಚ್ಚುನುಡಿಗಳಿಂದ ಬೇಸತ್ತ ದೀಪಕ್ ಯಾದವ್ ಇದನ್ನು ಮುಚ್ಚುವಂತೆ ಹೇಳುತ್ತಿದ್ದ. ಈ ಸಿಟ್ಟಿನಲ್ಲಿ ದೀಪಕ್ ಯಾದವ್ ಮಗಳನ್ನು ಕೊಂದಿದ್ದಾನೆ ಎನ್ನಲಾಗಿದೆ. ಗುರುವಾರ ರಾತ್ರಿ ರಾಧಿಕಾ ಕೋಚಿಂಗ್ ಅಕಾಡೆಮಿಯಿಂದ ಹಿಂದಿರುಗಿ ಊಟ ಮಾಡುತ್ತಿದ್ದ ವೇಳೆ ತಂದೆ ಮಗಳ ನಡುವೆ ಈ ವಿಚಾರವಾಗಿ ಮತ್ತೆ ಜಗಳವಾಗಿದ್ದು, ಸಿಟ್ಟಿನ ಭರದಲ್ಲಿ ಗುಂಡಿಕ್ಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಷ್ಟ್ರೀಯ ತಂಡಕ್ಕಾಗಿ ಆಡುತ್ತಿದ್ದ ರಾಧಿಕಾ ಹಲವು ಬಹುಮಾನಗಳನ್ನು ಗೆದ್ದುಕೊಂಡಿದ್ದರು. ಭುಜದ ನೋವು ಕಾಣಿಸಿಕೊಂಡ ಬಳಿಕ ಆಡುವುದನ್ನು ಬಿಟ್ಟು ಕೋಚಿಂಗ್ ಅಕಾಡೆಮಿ ಪ್ರಾರಂಭಿಸಿದ್ದರು. ಬಳಿಕ ಆಸುಪಾಸಿನ ಜನರು ದೀಪಕ್ ಯಾದವ್ನನ್ನು ಮಗಳ ದುಡಿಮೆಯಲ್ಲಿ ಬದುಕುತ್ತಿದ್ದಾನೆ ಎಂದು ಕುಹಕವಾಡುತ್ತಿದ್ದರು ಎನ್ನಲಾಗಿದೆ. ಮಗಳಿಗೆ ಗುಂಡಿಕ್ಕುವಾಗ ತಾಯಿಯೂ ಮನೆಯಲ್ಲೇ ಇದ್ದರು. ಸಹೋದರ ಹೊರಗೆ ಹೋಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
























