ವೇದ, ಉಪನಿಷತ್‌ ಅಧ್ಯಯನ, ಸಾವಯವ ಕೃಷಿ… ದಿಢೀರ್‌ ನಿವೃತ್ತಿಯ ಮಾತನಾಡಿದ ಅಮಿತ್‌ ಶಾ

ರಾಜಕೀಯ ಚಾಣಕ್ಯನ ರಿಟೈರ್‌ಮೆಂಟ್‌ ಪ್ಲಾನ್‌ ಕೇಳಿ ದೇಶಾದ್ಯಂತ ಸಂಚಲನ

ನವದೆಹಲಿ: ರಾಜಕಾರಣಿಗಳಿಗೆ ನಿವೃತ್ತಿಯಿಲ್ಲ ಎನ್ನುವುದು ಭಾರತದ ಮಟ್ಟಿಗೆ ಸತ್ಯವಾದ ಮಾತು. ಹಣ್ಣು ಹಣ್ಣು ಮುದುಕರಾಗಿ ಎದ್ದು ನಡೆಯಲು ಸಾಧ್ಯವಾಗದಿದ್ದರೂ ಅಧಿಕಾರಕ್ಕೆ ಅಂಟಿಕೂರುವವರು ನಮ್ಮ ದೇಶದ ರಾಜಕೀಯ ನಾಯಕರು. ಈ ಹಿನ್ನೆಲೆಯಲ್ಲಿ ಬಿಜೆಪಿ 75 ವರ್ಷ ದಾಟಿದವರಿಗೆ ನಿವೃತ್ತಿ ನೀಡುವ ಅಲಿಖಿತ ನಿಯಮವೊಂದನ್ನು ಪಾಲಿಸಿಕೊಂಡು ಬಂದಿದೆ. ಇದು ಎಲ್ಲರಿಗೂ ಅನ್ವಯವಾಗುವುದಿಲ್ಲ ಎನ್ನುವುದು ಬೇರೆ ಮಾತು. ಪ್ರಧಾನಿ ನರೇಂದ್ರ ಮೋದಿಯವರೂ ಸದ್ಯದಲ್ಲೇ 75ರ ಹರೆಯಕ್ಕೆ ಪದಾರ್ಪಣೆ ಮಾಡಲಿದ್ದು, ಅವರು ನಿವೃತ್ತಿಯಾಗುತ್ತಾರೋ ಅಥವಾ ಮುಂದುವರಿಯುತ್ತಾರೋ ಎನ್ನುವುದು ನಿಗೂಢವಾಗಿ ಉಳಿದಿದೆ. ಈ ನಡುವೆ ಮೋದಿಯವರಷ್ಟೇ ಜನಪ್ರಿಯರಾಗಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ ದಿಢೀರ್‌ ಎಂದು ನಿವೃತ್ತಿ ಕುರಿತು ಮಾತನಾಡಿ ಅಚ್ಚರಿ ಹುಟ್ಟಿಸಿದ್ದಾರೆ.

ಅಮಿತ್‌ ಶಾಗೆ ಇನ್ನೂ 60 ವರ್ಷ. ಬಿಜೆಪಿಯಲ್ಲಿ ಅವರು ಮೋಟಾಭಾಯಿ ಎಂದೇ ಕರೆಯಲ್ಪಡುತ್ತಾರೆ. ಬಿಜೆಪಿಯನ್ನು ಕೇಂದ್ರದಲ್ಲಿ ಸತತ ಮೂರು ಸಲ ಅಧಿಕಾರಕ್ಕೆ ತರುವಲ್ಲಿ ಮುಖ್ಯ ಪಾತ್ರ ವಹಿಸಿರುವ ಅಮಿತ್‌ ಶಾ ಭಾರತದ ರಾಜಕೀಯದ ಚಾಣಕ್ಯ ಎಂದೇ ಕರಿಯಲ್ಪಡುತ್ತಾರೆ. ಸದ್ಯದ ಮಟ್ಟಿಗೆ ರಾಜಕೀಯ ತಂತ್ರಗಾರಿಕೆ ಮಾಡುವುದರಲ್ಲಿ ಅವರಷ್ಟು ನಿಷ್ಣಾತ ರಾಜಕಾರಣಿ ಯಾರೂ ಇಲ್ಲ. ಹೀಗಿರುವಾಗ ಅಮಿತ್‌ ಶಾ ದಿಢೀರ್‌ ಎಂದು ನಿವೃತ್ತಿಯ ಮಾತು ಆಡಿದ್ದು ಯಾಕೆ ಎಂಬ ಪ್ರಶ್ನೆ ಮೂಡಿದೆ.





















































 
 

ಬುಧವಾರ ಕಾರ್ಯಕ್ರಮವೊಂದರಲ್ಲಿ ಅಮಿತ್‌ ಶಾ ನಿವೃತ್ತಿಯ ಬಗ್ಗೆ ಮಾತನಾಡಿದ್ದಾರೆ. ಇದರಲ್ಲಿ ನಿವೃತ್ತಿಯಾಗುತ್ತಿರುವ ಬಗ್ಗೆ ಹೇಳದಿದ್ದರೂ ನಿವೃತ್ತ ಜೀವನ ಹೇಗಿರಬೇಕು ಎಂಬ ಬಗ್ಗೆ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಸಂವಾದದ ವೇಳೆ ನಿವೃತ್ತಿಯ ಬಳಿಕ ವೇದ, ಉಪನಿಷತ್‌ ಅಧ್ಯಯನ ಮತ್ತು ಸಾವಯವ ಕೃಷಿ ಮಾಡಲು ನಿರ್ಧರಿಸಿದ್ದೇನೆ ಎಂದು ಶಾ ಹೇಳಿಕೊಂಡಿದ್ದಾರೆ. ವೇದ ಮತ್ತು ಉಪನಿಷತ್‌ಗಳ ಅಧ್ಯಯನದ ಬಗ್ಗೆ ಹೆಚ್ಚು ಮಾತನಾಡದಿದ್ದರೂ ಸಾವಯವ ಕೃಷಿಯ ಮೇಲೆ ತನಗಿರುವ ಆಸಕ್ತಿಯ ಬಗ್ಗೆ ಬಹಳಷ್ಟು ವಿಚಾರಗಳನ್ನು ಹೇಳಿಕೊಂಡಿದ್ದಾರೆ.

ರಸಗೊಬ್ಬರ ಹಾಕಿ ಬೆಳೆಸುವ ಗೋಧಿಯಿಂದ ಕ್ಯಾನ್ಸರ್‌, ಮಧುಮೇಹ, ಥೈರಾಯ್ಡ್‌ನಂಥ ಸಮಸ್ಯೆಗಳು ಬರುತ್ತವೆ. ರೋಗಗಳಿಂದ ದೂರ ಉಳಿಯಲು ನಾವು ಸಾವಯವ ಕೃಷಿಗೆ ಹೆಚ್ಚು ಒತ್ತು ಕೊಡಬೇಕೆಂದು ಹೇಳಿದ್ದಾರೆ.

ಇನ್ನೂ ಅನೇಕ ವರ್ಷಗಳ ಸಾರ್ವಜನಿಕ ಬದುಕು ಉಳಿದಿರುವಾಗಲೇ ಅಮಿತ್‌ ಶಾ ನಿವೃತ್ತಿ ಬಗ್ಗೆ ಮಾತನಾಡಿರುವುದು ಇಡೀ ದೇಶದಲ್ಲೆ ಸಂಚಲನ ಉಂಟುಮಾಡಿದೆ. ಬಿಜೆಪಿಯಲ್ಲಂತೂ ಈ ವಿಚಾರ ಬಹಳ ಚರ್ಚೆಯಾಗುತ್ತಿದೆ.

error: Content is protected !!
Scroll to Top