ರಾಜ್ಯ ಪಠ್ಯಕ್ರಮದ ಎಸ್‌ಎಸ್‌ಎಲ್‌ಸಿ ಮಕ್ಕಳಿಗೂ ಸಿಬಿಎಸ್‌ಇ ಮಾದರಿ ಪರೀಕ್ಷೆ

ಪರೀಕ್ಷಾ ಪದ್ಧತಿಯಲ್ಲಿ ಸಮಗ್ರ ಬದಲಾವಣೆಗೆ ಸಮಿತಿ ಶಿಫಾರಸು

ಬೆಂಗಳೂರು: ರಾಜ್ಯ ಪಠ್ಯಕ್ರಮ ಅನುಸರಿಸುವ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳ ಮಕ್ಕಳಿಗೂ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಮಾದರಿಯಲ್ಲೇ ಎಸ್‌ಎಸ್ಎಲ್‌ಸಿ ಪರೀಕ್ಷೆ ನಡೆಸುವ ಪ್ರಸ್ತಾವವೊಂದನ್ನು ಸರ್ಕಾರದ ಮುಂದಿಡಲಾಗಿದೆ. ಸಿಬಿಎಸ್‌ಇ ಪಠ್ಯಕ್ರಮದ ಪ್ರಕಾರ ಲಿಖಿತ ಪರೀಕ್ಷೆ ಹಾಗೂ ಆಂತರಿಕ ಅಂಕಗಳೂ ಸೇರಿ 100ಕ್ಕೆ ಕನಿಷ್ಠ 33 ಅಂಕ ಪಡೆದವರು ಉತ್ತೀರ್ಣರಾಗಲಿದ್ದಾರೆ. ಈ ಸಂಬಂಧ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ.

ಸಿಬಿಎಸ್‌ಇ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಆಂತರಿಕ ಅಂಕಗಳೂ ಸೇರಿ ಒಟ್ಟಾರೆ ಶೇ.33 ಅಂಕ ಪಡೆದರೂ ತೇರ್ಗಡೆಯಾಗುತ್ತಾರೆ. ಪ್ರತಿ ವಿಷಯಕ್ಕೂ 80 ಅಂಕಗಳಿಗೆ ಲಿಖಿತ ಪರೀಕ್ಷೆ ಇದ್ದು, 20 ಆಂತರಿಕ ಅಂಕ ಇರುತ್ತದೆ. ಎರಡೂ ಸೇರಿ 100ಕ್ಕೆ ಕನಿಷ್ಠ 33 ಅಂಕ ಪಡೆದವರು ಉತ್ತೀರ್ಣರಾಗುತ್ತಾರೆ. ಇದೇ ಮಾದರಿಯನ್ನು ಎಸ್‌ಎಸ್‌ಎಲ್‌ಸಿಯಲ್ಲೂ ಅಳವಡಿಸಲು ರಾಜ್ಯ ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ.





















































 
 

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡ ಸೇರಿ ಪ್ರಥಮ ಭಾಷೆಯನ್ನು 125, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ, ದ್ವಿತೀಯ ಹಾಗೂ ತೃತೀಯ ಭಾಷಾ ವಿಷಯಗಳ ಪರೀಕ್ಷೆಯನ್ನು 100 ಅಂಕಗಳಿಗೆ ನಡೆಸಲಾಗುತ್ತದೆ. ಇದರಲ್ಲಿ ಪ್ರಥಮ ಭಾಷೆ 25 ಹಾಗೂ ಉಳಿದ ವಿಷಯಗಳಲ್ಲಿ ತಲಾ 20 ಅಂಕಗಳು ಆಂತರಿಕ ಮೌಲ್ಯಮಾಪನಕ್ಕೆ ನಿಗದಿ ಮಾಡಲಾಗಿದೆ. ಈಗಿರುವ ಎಸ್‌ಎಸ್ಎಲ್‌ಸಿ ಪರೀಕ್ಷಾ ನಿಯಮದ ಪ್ರಕಾರ ಒಬ್ಬ ವಿದ್ಯಾರ್ಥಿ ಉತ್ತೀರ್ಣರಾಗಲು ಶೇ.35 ಅಂಕಗಳನ್ನು ಪಡೆಯಬೇಕು. ಆದರೆ, ಸಿಬಿಎಸ್‌ಇ ಮಾದರಿಯ ಹೊಸ ನಿಯಮ ಜಾರಿಯಾದರೆ ಒಬ್ಬ ವಿದ್ಯಾರ್ಥಿ ಒಂದು ವಿಷಯದಲ್ಲಿ 20 ಅಂತರಿಕ ಅಂಕ ಪಡೆದರೆ, ಲಿಖಿತ ಪರೀಕ್ಷೆಯಲ್ಲಿ 13 ಬಂದರೂ ಸಾಕು ಆ ವಿಷಯದಲ್ಲಿ ತೇರ್ಗಡೆಯಾಗುತ್ತಾನೆ.

ಕನ್ನಡ ಸೇರಿ ಎಸ್‌ಎಸ್ಎಲ್‌ಸಿ ಪ್ರಥಮ ಭಾಷಾ ಪರೀಕ್ಷೆಯ ಅಂಕವನ್ನು 125ರ ಬದಲು 100ಕ್ಕೆ ಸೀಮಿತಗೊಳಿಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ನಿರ್ಧರಿಸಿದೆ. 2026ರ ಮಾರ್ಚ್, ಏಪ್ರಿಲ್‌ನಲ್ಲಿ ನಡೆಯುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಇತರ ಐದು ವಿಷಯಗಳಂತೆ ಕನ್ನಡಕ್ಕೂ 100 ಅಂಕ ಇರುತ್ತದೆ. ಒಟ್ಟಾರೆ ಅಂಕಗಳು 600 ಇರುತ್ತವೆ. ಇದುವರೆಗೂ 625 ಅಂಕಗಳು ಇದ್ದವು. ಪ್ರತಿ ವಿಷಯದಲ್ಲೂ 20 ಅಂಕ ಆಂತರಿಕ ಮೌಲ್ಯಮಾಪನ ಹಾಗೂ 80 ಅಂಕ ಲಿಖಿತ ಪರೀಕ್ಷೆ ಒಳಗೊಂಡಿರುತ್ತದೆ.

ನಿವೃತ್ತ ಪ್ರಾಧ್ಯಾಪಕ ಗಣೇಶ್ ಭಟ್ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಪರೀಕ್ಷೆ ಸುಧಾರಣಾ ಸಮಿತಿ ಮುಂಬರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಒಂದು ಅಂಕದ, ಬಹು ಆಯ್ಕೆಯ ಪ್ರಶ್ನೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಅಳವಡಿಸಲು, ಪ್ರತಿ ವಿಭಾಗದಲ್ಲೂ ಹೆಚ್ಚು ಪ್ರಶ್ನೆಗಳನ್ನು ನೀಡಿ, ಯಾವುದಾದರೂ ಎರಡು, ಮೂರು, ನಾಲ್ಕು ಪ್ರಶ್ನೆಗಳನ್ನು ಆಯ್ಕೆ ಮಾಡಿಕೊಂಡು ಉತ್ತರ ಬರೆಯುವ ಅವಕಾಶವನ್ನು ವಿದ್ಯಾರ್ಥಿಗಳಿಗೆ ನೀಡಲು ಸಲಹೆ ನೀಡಿದೆ.

error: Content is protected !!
Scroll to Top