ಪಾಸ್‌ಪೋರ್ಟ್ ಕಿತ್ತುಕೊಂಡು ಕಾಟ ಕೊಡುತ್ತಿದ್ದ ಯೆಮೆನ್ ಪಾಲುದಾರನನ್ನು ಕೊಂದ ಪ್ರಕರಣ
ನವದೆಹಲಿ : ಯೆಮೆನ್‌ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಕೇರಳದ ನರ್ಸ್ ನಿಮಿಷಾ ಪ್ರಿಯಾ ಅವರನ್ನು ಉಳಿಸಿಕೊಳ್ಳುವ ಎಲ್ಲ ಪ್ರಯತ್ನಗಳು ವಿಫಲಗೊಂಡಿವೆ. 37 ವರ್ಷದ ನರ್ಸ್ ನಿಮಿಷಾ ಪ್ರಿಯಾ ಅವರನ್ನು ಜುಲೈ 16ರಂದು ಯೆಮೆನ್ ದೇಶದಲ್ಲಿ ಗಲ್ಲಿಗೇರಿಸಲು ನಿರ್ಧರಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಯೆಮೆನ್ ಪ್ರಜೆ ತಲಾಲ್ ಅಬ್ದೋ ಮೆಹ್ದಿ ಎಂಬವರನ್ನು ಕೊಲೆ ಮಾಡಿದ ಆರೋಪದ ಮೇಲೆ ನಿಮಿಷಾ ಪ್ರಿಯಾಗೆ ಮರಣದಂಡನೆ ವಿಧಿಸಲಾಗಿದೆ. ಯೆಮೆನ್‌ನಲ್ಲಿ ಅವರಿಬ್ಬರು ಕ್ಲಿನಿಕ್ ಒಂದನ್ನು ಪಾಲುದಾರಿಕೆಯಲ್ಲಿ ಪ್ರಾರಂಭಿಸಿದ್ದರು. ಆದರೆ ನಂತರ ವ್ಯವಹಾರದಲ್ಲಿ ತಕರಾರು ಬಂದು ನಿಮಿಷಾ ಪಾಲುದಾರಿಕೆಯಿಂದ ಹೊರಬರಲು ನಿರ್ಧರಿಸಿದಾಗ ತಲಾಲ್ ಆಕೆಯ ಪಾಸ್‌ಪೋರ್ಟ್ ಹಿಂದಿರುಗಿಸಿರಲಿಲ್ಲ. ಪಾಸ್‌ಪೋರ್ಟ್ ಮರಳಿ ಪಡೆಯುವ ಪ್ರಯತ್ನದಲ್ಲಿ ನಿಮಿಷಾ ಪ್ರಿಯಾ, ತಲಾಲ್‌ನನ್ನು ಡ್ರಗ್ ನೀಡಿ ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ.
ತಲಾಲ್ ಸತ್ತ ನಂತರ, ನಿಮಿಷಾ ಪ್ರಿಯಾ ಮತ್ತು ಆಕೆಯ ಯೆಮೆನ್ ಸಹೋದ್ಯೋಗಿ ಹನಾನ್ ಆತನ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ನೀರಿನ ಟ್ಯಾಂಕ್‌ನಲ್ಲಿ ವಿಲೇವಾರಿ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಪ್ರಕರಣದಲ್ಲಿ ನಿಮಿಷಾಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ.
ನಿಮಿಷಾ ಪ್ರಿಯಾ ಅವರ ತಾಯಿ ಪ್ರೇಮಾ ಕುಮಾರಿ ಅವರ ಪವರ್ ಆಫ್ ಅಟಾರ್ನಿ ಹೊಂದಿರುವ ಮಾನವ ಹಕ್ಕುಗಳ ಕಾರ್ಯಕರ್ತ ಸ್ಯಾಮ್ಯುಯೆಲ್ ಜೆರೋಮ್, ಯೆಮೆನ್ ಜೈಲು ಅಧಿಕಾರಿಗಳು ನಿಮಿಷಾ ಅವರ ಮರಣದಂಡನೆಯ ದಿನಾಂಕದ ಬಗ್ಗೆ ತಿಳಿಸಿದ್ದಾರೆ ಎಂದು ಖಚಿತಪಡಿಸಿದ್ದಾರೆ. 2017ರಲ್ಲಿ ತನ್ನ ಬ್ಯುಸಿನೆಸ್ ಪಾರ್ಟನರ್ ಆಗಿದ್ದ ತಲಾಲ್ ಅಬ್ದೋ ಮಹ್ದಿ ಅವರನ್ನು ಕೊಲೆ ಮಾಡಿದ ಆರೋಪದ ಮೇಲೆ ನಿಮಿಷಾ ಪ್ರಿಯಾಳನ್ನು ಬಂಧಿಸಲಾಗಿತ್ತು. ಅದಾದ 3 ವರ್ಷಗಳ ನಂತರ 2020ರಲ್ಲಿ ಯೆಮೆನ್ ನ್ಯಾಯಾಲಯವು ಈ ಪ್ರಕರಣದಲ್ಲಿ ಆಕೆಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು.
ಕೇರಳದ ಪಾಲಕ್ಕಾಡ್ ಜಿಲ್ಲೆಯವರಾದ ನಿಮಿಷಾ ಪ್ರಿಯಾ, 2011ರಲ್ಲಿ ನರ್ಸಿಂಗ್ ತರಬೇತಿ ಪೂರ್ಣಗೊಳಿಸಿದ ನಂತರ ಯೆಮೆನ್‌ಗೆ ತೆರಳಿದ್ದರು. ಆರಂಭದಲ್ಲಿ ಅವರು ಯೆಮೆನ್‌ನ ಹಲವಾರು ಆಸ್ಪತ್ರೆಗಳಲ್ಲಿ ಕೆಲಸ ಮಾಡಿದ್ದರು. ನಂತರ ತಮ್ಮದೇ ಆದ ಕ್ಲಿನಿಕ್ ತೆರೆಯುವ ನಿರ್ಧಾರಕ್ಕೆ ಬಂದರು. ಯೆಮೆನ್‌ನಲ್ಲಿ ತನ್ನ ಕ್ಲಿನಿಕ್ ಅನ್ನು ಪ್ರಾರಂಭಿಸಲು ಸಹಾಯ ಮಾಡುವುದಾಗಿ ತಲಾಲ್ 2014ರಲ್ಲಿ ಭರವಸೆ ನೀಡಿದಾಗ ಆಕೆ ತಲಾಲ್ ಅಬ್ದೋ ಮಹ್ದಿ ಅವರ ಜೊತೆ ಪಾಲುದಾರಿಕೆ ಮಾಡಿಕೊಂಡರು.
ಯೆಮೆನ್ ವ್ಯವಹಾರ ಕಾನೂನಿನ ಪ್ರಕಾರ ಮಧ್ಯಪ್ರಾಚ್ಯ ದೇಶದಲ್ಲಿ ವ್ಯವಹಾರವನ್ನು ಪ್ರಾರಂಭಿಸಲು ವಿದೇಶಿಯೊಬ್ಬ ಸ್ಥಳೀಯರೊಂದಿಗೆ ಪಾಲುದಾರಿಕೆ ಮಾಡಿಕೊಳ್ಳಬೇಕಾಗುತ್ತದೆ. ಕಾನೂನಿನ ಪ್ರಕಾರ, ನಿಮಿಷಾ ತಲಾಲ್ ಜೊತೆ ಕ್ಲಿನಿಕ್ ತೆರೆಯಲು ಒಪ್ಪಂದ ಮಾಡಿಕೊಂಡು 2015ರಲ್ಲಿ ಸನಾದಲ್ಲಿ ತಲಾಲ್ ಜೊತೆ ಕ್ಲಿನಿಕ್ ಅನ್ನು ಪ್ರಾರಂಭಿಸಿದರು. ಆದರೆ ಶೀಘ್ರದಲ್ಲೇ ಅವರ ನಡುವೆ ಭಿನ್ನಾಭಿಪ್ರಾಯಗಳು ಹುಟ್ಟಿಕೊಂಡವು. ಹೀಗಾಗಿ, ತಲಾಲ್ ತನಗೆ ದೌರ್ಜನ್ಯ ಎಸಗಿ, ಚಿತ್ರಹಿಂಸೆ ನೀಡಿದ್ದಾನೆ ಎಂದು ಆಕೆ ಆರೋಪಿಸಿದ್ದರು. ಇದೇ ಕೋಪದಲ್ಲಿ ಆಕೆ ಯೆಮೆನ್ ಬಿಟ್ಟು ಹೋಗದಂತೆ ನೋಡಿಕೊಳ್ಳಲು ಅವನು ಅವಳ ಪಾಸ್‌ಪೋರ್ಟ್ ತೆಗೆದುಕೊಂಡಿದ್ದ ಎನ್ನಲಾಗಿದೆ.
ಬಳಿಕ ತಲಾಲ್ ವಿರುದ್ಧ ನಿಮಿಷಾ ಪೊಲೀಸ್ ದೂರು ದಾಖಲಿಸಿದರು. ಇದರಿಂದ 2016ರಲ್ಲಿ ಆತನನ್ನು ಬಂಧಿಸಲಾಯಿತು. ಅದಾದ ಸ್ವಲ್ಪ ಸಮಯದ ನಂತರ ಅವನನ್ನು ಬಿಡುಗಡೆ ಮಾಡಲಾಯಿತು. ಹೊರಗೆ ಬಂದ ತಲಾಲ್ ಮತ್ತು ನಿಮಿಷಾ ನಡುವೆ ಮತ್ತೆ ಜಗಳ ಹೆಚ್ಚಾಗಿತ್ತು. 2017ರಲ್ಲಿ ಇಬ್ಬರೂ ಜಗಳವಾಡಿದಾಗ ನಿಮಿಷಾ ತನ್ನ ಪಾಸ್‌ಪೋರ್ಟ್ ಅನ್ನು ಮರಳಿ ಪಡೆಯಲು ಮತ್ತು ಭಾರತಕ್ಕೆ ಹಿಂತಿರುಗಲು ಸ್ಥಳೀಯ ಜೈಲು ವಾರ್ಡನ್‌ನ ಸಹಾಯವನ್ನು ಕೋರಿದರು. ಅವರು ತಲಾಲ್‌ನನ್ನು ಅಶಕ್ತಗೊಳಿಸಲು ನಿದ್ರಾಜನಕಗಳನ್ನು ಬಳಸಲು ಸೂಚಿಸಿದರು. ಅವರ ಸಲಹೆಯಂತೆ ನಿಮಿಷಾ, ತಲಾಲ್ ಬಳಿಯಿದ್ದ ತನ್ನ ಪಾಸ್‌ಪೋರ್ಟ್ ಮರಳಿ ಪಡೆಯುವ ಪ್ರಯತ್ನದಲ್ಲಿ ಅವನಿಗೆ ಅಮಲಿನ ಡ್ರಗ್ ಚುಚ್ಚಿದಳು. ಆದರೆ ಅದು ಓವರ್ ಡೋಸ್ ಆಗಿ ಆತ ಸಾವನ್ನಪ್ಪಿದನು. ಇದರಿಂದ ಆಕೆಯನ್ನು ಬಂಧಿಸಿ, ಗಲ್ಲು ಶಿಕ್ಷೆಗೆ ಗುರಿಪಡಿಸಲಾಗಿದೆ.
ಆಕೆಯ ತಾಯಿ ಪ್ರೇಮಾ ಕುಮಾರಿ ಮರಣದಂಡನೆಯ ವಿರುದ್ಧ ಯೆಮಿನಿ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದರು. ಆದರೆ 2023ರಲ್ಲಿ ಮೇಲ್ಮನವಿಯನ್ನು ತಿರಸ್ಕರಿಸಲಾಯಿತು. 2017ರಲ್ಲಿ ಯೆಮೆನ್ ವಿಚಾರಣಾ ನ್ಯಾಯಾಲಯ ನಿಮಿಷಾ ಪ್ರಿಯಾಗೆ ಮರಣದಂಡನೆ ಕಾಯಂಗೊಳಿಸಿದೆ. ನಂತರ 2023ರಲ್ಲಿ ಯೆಮೆನ್ ಸುಪ್ರೀಂ ಕೋರ್ಟ್ ಈ ತೀರ್ಪನ್ನು ಎತ್ತಿಹಿಡಿಯಿತು. ಯೆಮೆನ್ ಅಧ್ಯಕ್ಷ ರಶಾದ್ ಅಲ್-ಅಲಿಮಿ ಕೂಡ ಆಕೆಯ ಮರಣದಂಡನೆಯನ್ನು ಅನುಮೋದಿಸಿದ್ದರು. ಹೀಗಾಗಿ, ಆಕೆ ಜುಲೈ 16ರಂದು ಗಲ್ಲಿಗೇರಿಸಲಿದ್ದಾರೆ.
























