ಬೆಂಗಳೂರು: ರಾಜ್ಯದ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿರುವ ಜನೌಷಧ ಕೇಂದ್ರಗಳನ್ನು ಸ್ಥಗಿತ ಮಾಡುವಂತೆ ಕರ್ನಾಟಕ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದೆ.
ಸರ್ಕಾರದ ನಡೆಯನ್ನು ಪ್ರಶ್ನೆ ಮಾಡಿ 16 ಜನರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಈ ಅರ್ಜಿಯನ್ನು ನ್ಯಾಯಮೂರ್ತಿ ಎಂ. ಐ. ಅರುಣ್ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿದೆ. ಹಾಗೆಯೇ ಮುಂದಿನ ವಿಚಾರಣೆಯ ವರೆಗೂ ಅರ್ಜಿದಾರರ ಜನೌಷಧ ಕೇಂದ್ರ ಸ್ಥಗಿತ ಮಾಡದಂತೆ ಮಧ್ಯಂತರ ಆದೇಶ ಹೊರಡಿಸಿದೆ.
ಈ ಸಂಬಂಧ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿದ್ದು, ಜನೌಷಧ ಕೇಂದ್ರಗಳನ್ನು ಆರಂಭ ಮಾಡಲು, ಅದಕ್ಕೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲು ಹಣ ಖರ್ಚು ಮಾಡಲಾಗಿದೆ. ಹಾಗೆಯೇ ಅದರಲ್ಲಿ ಬಡವರಿಗೆ ಅನುಕೂಲವಾಗುವಂತೆ 50% ದಿಂದ 90% ವರೆಗಿನ ರಿಯಾಯಿತಿ ದರದಲ್ಲಿ ಔಷಧ ನೀಡಲಾಗುತ್ತಿದೆ. ಹೀಗಿರುವಾಗ ರಾಜ್ಯ ಸರ್ಕಾರ ಜನೌಷಧ ಕೇಂದ್ರಗಳನ್ನು ಮುಚ್ಚುವಂತೆ ಆದೇಶ ನೀಡಿರುವುದು ತಮ್ಮ ಮೂಲಭೂತ ಹಕ್ಕಿಗೆ ಧಕ್ಕೆ ಮಾಡಿದಂತಾಗುವುದಾಗಿ ಕೋರ್ಟ್ ಗಮನಕ್ಕೆ ತಂದಿದ್ದಾರೆ.
ವಾದ ವಿವಾದಗಳನ್ನು ಆಲಿಸಿದ ನ್ಯಾಯಾಲಯ ಜನೌಷಧ ಕೇಂದ್ರಗಳನ್ನು ಮುಂದಿನ ವಿಚಾರಣೆಯ ವರೆಗೆ ಮುಚ್ಚದಂತೆ ಮಧ್ಯಂತರ ಆದೇಶ ಹೊರಡಿಸಿರುವುದಾಗಿದೆ.
























