ಅಕ್ರಮ ವಲಸಿಗರನ್ನು ಮತಬ್ಯಾಂಕ್‌ಗೆ ಬಳಸುವ ಪರಿಸ್ಥಿತಿ ಕಾಂಗ್ರೆಸ್‌ಗೆ ಬಂದಿಲ್ಲ
ಬೆಂಗಳೂರು: ಸುಮಾರು 200 ಕ್ಕೂ ಅಧಿಕ ಅಕ್ರಮ ಬಾಂಗ್ಲಾದೇಶಿ ವಲಸಿಗರನ್ನು ಕಳೆದ ಕೆಲವು ತಿಂಗಳುಗಳಲ್ಲಿ ರಾಜ್ಯದಿಂದ ಗಡೀಪಾರು ಮಾಡಿರುವುದಾಗಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.
ರಾಜ್ಯದಲ್ಲಿ ನಿರ್ಮಾಣ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ವಲಸಿಗರ ವಿರುದ್ಧ ದೂರುಗಳು ಬಂದಿದ್ದು, ಅಕ್ರಮವಾಗಿ ಇಲ್ಲಿ ಬಂದು ನೆಲೆಸಿರುವವರನ್ನು ಗಡೀಪಾರು ಮಾಡಲು ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ. ಈ ಪ್ರಕ್ರಿಯೆ ನಿರಂತರ ಎಂದು ಅವರು ಮಾಹಿತಿ ನೀಡಿದ್ದಾರೆ.
ಅಕ್ರಮ ವಲಸಿಗರ ಬಗ್ಗೆ ಪ್ರಾದೇಶಿಕ ನೋಂದಣಿ ಕಚೇರಿಯ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡುತ್ತಾರೆ. ನಿರ್ಮಾಣ ಕಾರ್ಮಿಕರ ಮೇಲೆ ಸರ್ಕಾರ ನಿಗಾ ಇರಿಸಿದ್ದು, ಅವರು ಅಕ್ರಮ ವಲಸಿಗರು ಎಂದು ಸಾಬೀತಾದ ಕೂಡಲೇ ಅವರನ್ನು ಗಡೀಪಾರು ಮಾಡುತ್ತೇವೆ. ಅದರಲ್ಲಿ ಮೃದು ಧೋರಣೆ ತಳೆಯುವ ಮಾತೇ ಇಲ್ಲ. ಹಾಗೆಯೇ ಅವರನ್ನು ಮತ ಬ್ಯಾಂಕ್‌ಗಾಗಿ ಕಾಂಗ್ರೆಸ್ ಬಳಸುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಚುನಾವಣೆಯಲ್ಲಿ ಗೆಲ್ಲಲು ಅಕ್ರಮ ವಲಸಿಗರ ಮತಗಳನ್ನು ಪಡೆಯುವ ಪರಿಸ್ಥಿತಿ ನಮಗೆ ಬಂದಿಲ್ಲ ಎಂದಿದ್ದಾರೆ.
























