ರಾಷ್ಟ್ರ ರಾಜಕಾರಣಕ್ಕೆ ಹೋಗಲಾರೆ : ಸಿದ್ದರಾಮಯ್ಯ ಸ್ಪಷ್ಟನೆ

ಮುಖ್ಯಮಂತ್ರಿ ಬದಲಾಯಿಸುವ ಹೈಕಮಾಂಡ್‌ ಪ್ರಯತ್ನಕ್ಕೆ ಪರೋಕ್ಷ ಎಚ್ಚರಿಕೆ

ಬೆಂಗಳೂರು: ತಾನು ರಾಷ್ಟ್ರ ರಾಜಕಾರಣಕ್ಕೆ ಹೋಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೊಂಡಿದ್ದಾರೆ. ಈ ಮೂಲಕ ರಾಷ್ಟ್ರ ರಾಜಕಾರಣಕ್ಕೆ ತನ್ನನ್ನು ಸಾಗಹಾಕಿ ಮುಖ್ಯಮಂತ್ರಿ ಹುದ್ದೆಯನ್ನು ಬದಲಾಯಿಸುವ ಹೈಕಮಾಂಡ್‌ ಪ್ರಯತ್ನಕ್ಕೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ. ಸಿದ್ದರಾಮಯ್ಯನವರನ್ನು ಎಐಸಿಸಿಯಲ್ಲಿ ಒಬಿಸಿ ಸಲಹಾ ಮಂಡಳಿ ಸೃಷ್ಟಿಸಿ ಅದಕ್ಕೆ ಅಧ್ಯಕ್ಷರನ್ನಾಗಿ ಮಾಡುವ ಪ್ರಯತ್ನ ನಡೆದಿತ್ತು. ಆದರೆ ಅಧ್ಯಕ್ಷ ಹುದ್ದೆ ಬೇಡ ಎಂದು ಸಿದ್ದರಾಮಯ್ಯನವರು ಹೇಳಿದ ಬಳಿಕ ಅವರನ್ನು ಈ ಮಂಡಳಿಯ ಸದಸ್ಯರನ್ನಾಗಿ ಮಾಡಲಾಗಿತ್ತು. ಇದು ಅವರನ್ನು ರಾಜ್ಯ ರಾಜಕೀಯದಿಂದ ದೂರ ಮಾಡುವ ಹೈಕಮಾಂಡ್‌ ಪ್ರಯತ್ನ ಎಂದೇ ಭಾವಿಸಲಾಗಿದೆ.

ಈ ಹಿನ್ನೆಲೆಯಲ್ಲಿ ತನ್ನ ಆಪ್ತರ ಬಳಿ ಸಿದ್ದರಾಮಯ್ಯ ರಾಷ್ಟ್ರ ರಾಜಕಾರಣಕ್ಕೆ ನಾನು ಆಗಲೇ ಹೋಗಿಲ್ಲ, ಈಗ ಯಾಕೆ ಹೋಗಲಿ? ರಾಜಕೀಯದ ಕಡೇ ಕಾಲಘಟ್ಟದಲ್ಲಿ ಇರುವಾಗ ರಾಷ್ಟ್ರ ರಾಜಕರಾಣಕ್ಕೆ ಯಾಕೆ ನಾನು ಹೋಗಬೇಕು ಎಂದು ಹೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ.





















































 
 

ರಾಷ್ಟ್ರ ರಾಜಕಾರಣಕ್ಕೆ ಹೋಗುವ ವಿಚಾರವಾಗಿ ತನ್ನ ಆಪ್ತರ ಮೂಲಕ ಉತ್ತರ ನೀಡಿದ್ದಾರೆ. ರಾಷ್ಟ್ರ ರಾಜಕಾರಣದಲ್ಲಿ ನನಗೆ ಆಸಕ್ತಿ ಇಲ್ಲ. ಈಗ ವಯಸ್ಸು ಕೂಡ ಇಲ್ಲ. ಗೌರವಯುತ ಸಾರ್ವಜನಿಕ ಬದುಕು ಇಲ್ಲೇ ಮುಗಿಯಲಿ. ಇಲ್ಲಿ ತನಕ ಆ ರೀತಿ ಏನೂ ಚರ್ಚೆ ನಡೆದಿಲ್ಲ. ಒಬಿಸಿ ಸಭೆಯ ನೇತೃತ್ವದ ಬಗ್ಗೆ ದೆಹಲಿಯ ನಾಯಕರಿಗೆ ವಿವರಣೆ ಕೊಡುತ್ತೇನೆ ಎಂದು ಹೇಳಿದ್ದಾರೆ.

ಎಐಸಿಸಿ ಒಬಿಸಿ ಸಲಹಾ ಮಂಡಳಿಯಲ್ಲಿ ಸ್ಥಾನ ಪಡೆದ ಹಿನ್ನೆಲೆಯಲ್ಲಿ ಗುರುವಾರ ಕಾಂಗ್ರೆಸ್ ಹೈಕಮಾಂಡ್ ಭೇಟಿಗೆ ಸಿಎಂ ಮುಂದಾಗಿದ್ದು ಸ್ಪಷ್ಟನೆ ಕೇಳಲು ಬಯಸಿದ್ದಾರೆ.
ಎಐಸಿಸಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷರಾದ ಡಾ.‌ಅನಿಲ್ ಜೈಹಿಂದ್ ಅವರ ಅಧ್ಯಕ್ಷತೆಯಲ್ಲಿ ಜುಲೈ 15ರಂದು ಒಬಿಸಿ ಸಲಹಾ ಮಂಡಳಿ ಸಭೆ ಬೆಂಗಳೂರಿನಲ್ಲಿ ನಡೆಯಲಿದೆ.‌ ಸಭೆಯ ಆತಿಥ್ಯವನ್ನು ಮುಖ್ಯಮಂತ್ರಿಗಳು ವಹಿಸಿಕೊಂಡಿದ್ದು ಸಭೆ ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಭವನದಲ್ಲಿ ಆಯೋಜನೆಗೊಂಡಿದೆ.

ವಿವಿಧ ರಾಜ್ಯಗಳ ಪಕ್ಷದ ಮಾಜಿ ಮುಖ್ಯಮಂತ್ರಿಗಳು, ಹಾಲಿ ಮತ್ತು ಮಾಜಿ ಸಂಸದರು, ಶಾಸಕರು ಸೇರಿದಂತೆ 50 ಮಂದಿ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಎಐಸಿಸಿಯ ಒಬಿಸಿ ಘಟಕದ ಸಲಹ ಸಮಿತಿಗೆ ಬೇರೆ ಬೇರೆ ರಾಜ್ಯದ ಪ್ರಮುಖ 24 ಒಬಿಸಿ ನಾಯಕರನ್ನು ಸಲಹೆಗಾರರಾಗಿ ನೇಮಿಸಲಾಗಿದೆ.

error: Content is protected !!
Scroll to Top