ರೈಲು ಬರುತ್ತಿರುವುದನ್ನು ನೋಡಿಯೂ ದಾಟುವ ಸಾಹಸ ಮಾಡಿದಾಗ ದುರಂತ
ಚೆನ್ನೈ : ಲೆವೆಲ್ ಕ್ರಾಸಿಂಗ್‌ನಲ್ಲಿ ಶಾಲಾ ವಾಹನಕ್ಕೆ ರೈಲು ಡಿಕ್ಕಿ ಹೊಡೆದು ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತಮಿಳುನಾಡಿನ ಕಡ್ಡಲೂರು ಎಂಬಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ.
ಬೆಳಗ್ಗೆಮಕ್ಕಳನ್ನು ಹತ್ತಿಸಿಕೊಂಡು ಶಾಲೆಗೆ ಹೋಗುತ್ತಿರುವಾಗ ಈ ದುರ್ಘಟನೆ ಸಂಭವಿಸಿದೆ. ಕಡ್ಡಲೂರು ಸಮೀಪ ಸೆಮ್ಮನಕೊಪ್ಪಂ ಎಂಬಲ್ಲಿ ಲೆವೆಲ್ ಕ್ರಾಸಿಂಗ್‌ನ್ನು ಶಾಲಾ ವ್ಯಾನ್ ದಾಟುತ್ತಿದ್ದಾಗ ವೇಗವಾಗಿ ಬಂದ ರೈಲು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ವ್ಯಾನ್ ಪೂರ್ತಿ ಜಖಂಗೊಂಡಿದೆ. ಈ ಸಂದರ್ಭದಲ್ಲಿ ವ್ಯಾನಿನಲ್ಲಿ ಐವರು ಮಕ್ಕಳು ಮಾತ್ರ ಇದ್ದರು. ಇಬ್ಬರು ಮೃತಪಟ್ಟಿದ್ದು, ಮೂವರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ವ್ಯಾನಿನ ಚಾಲಕನೂ ಗಾಯಗೊಂಡಿದ್ದಾನೆ.
ರೈಲ್ವೆ ಗೇಟಿನ ಕಾವಲುಗಾರ ರೈಲು ಬರುತ್ತಿರುವುದನ್ನು ಗಮನಿಸಿ ಗೇಟ್ ಮುಚ್ಚಲು ಮುಂದಾಗಿದ್ದ. ಆದರೆ ವ್ಯಾನಿನ ಚಾಲಕ ತನಗೆ ದಾಟಲು ಅವಕಾಶ ಕೊಡುವಂತೆ ವಿನಂತಿಸಿದಾಗ ಗೇಟ್ ಮುಚ್ಚಲು ತುಸು ತಡ ಮಾಡಿದ್ದ. ಈ ವೇಳೆ ರೈಲು ಬಂದು ವ್ಯಾನಿಗೆ ಅಪ್ಪಳಿಸಿದೆ. ಚಾಲಕ ಮತ್ತು ಮೂವರು ಮಕ್ಕಳ ಸ್ಥಿತಿ ಚಿಂತಾಜನಕವಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
























