ಸರಣಿ ಹೃದಯಾಘಾತಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ರಚಿಸಿದ ತಜ್ಞ ವೈದ್ಯರ ಸಮಿತಿಯಿಂದ ಅಧ್ಯಯನ
ಬೆಂಗಳೂರು: ಐಸಿಎಂಆರ್ ಬಳಿಕ ರಾಜ್ಯ ಸರ್ಕಾರವೇ ರಚಿಸಿದ ಸಮಿತಿ ಕೂಡ ಹೃದಯಾಘಾತಗಳಿಗೆ ಕೋವಿಡ್ ಲಸಿಕೆ ಕಾರಣವಲ್ಲ ಎಂದು ವರದಿ ನೀಡಿದೆ. ಡಾ. ರವೀಂದ್ರನಾಥ್ ನೇತೃತ್ವದ ಸಮಿತಿ ಜುಲೈ 2ರಂದು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಹಠಾತ್ ಹೃದಯಾಘಾತಕ್ಕೆ ಕೋವಿಡ್-19 ಲಸಿಕೆ ಅಥವಾ ಹಿಂದಿನ ಸೋಂಕು ಕಾರಣವಲ್ಲ. ಕೋವಿಡ್ ಲಸಿಕೆಗೂ ಈ ಹೃದಯಾಘಾತದ ಘಟನೆಗಳಿಗೂ ಯಾವುದೇ ಸಂಬಂಧ ಇಲ್ಲ ಎಂದು ತಿಳಿಸಿದೆ. ರಾಜ್ಯದಲ್ಲಿ ಹೆಚ್ಚುತ್ತಿರುವ ಹಠಾತ್ ಹೃದಯಾಘಾತದಿಂದ ಸರಣಿ ಸಾವುಗಳಿಂದ ಎಚ್ಚೆತ್ತ ರಾಜ್ಯ ಸರ್ಕಾರ ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ ಡಾ. ರವೀಂದ್ರನಾಥ್ ನೇತೃತ್ವದಲ್ಲಿ ಅಧ್ಯಯನಕ್ಕಾಗಿ ತಾಂತ್ರಿಕ ಸಲಹಾ ಸಮಿತಿ ರಚಿಸಿತ್ತು.
ಇದಕ್ಕೂ ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯ ಕೋವಿಡ್ ಲಸಿಕೆಗಳಿಂದ ಹೃದಯಾಘಾತ ಪ್ರಕರಣಗಳು ಹೆಚ್ಚಾಗಿರಬಹುದು ಎಂದು ಹೇಳಿ ಎಡವಟ್ಟು ಮಾಡಿಕೊಂಡಿದ್ದರು. ಅವರ ಹೇಳಿಕೆ ಬೆನ್ನಲ್ಲೇ ಐಸಿಎಂಅರ್ ವರದಿ ಬಿಡುಗಡೆಯಾಗಿದ್ದು, ಇದರಲ್ಲಿ ಕೋವಿಡ್ ಲಸಿಕೆಯಿಂದಾಗಿ ಹೃದಯಾಘಾತ ಸಂಭವಿಸುತ್ತಿಲ್ಲ ಎಂದು ಸ್ಪಷ್ಟಪಡಿಸಲಾಗಿತ್ತು. ಈ ನಡುವೆ ರಾಜ್ಯ ಸರ್ಕಾರ ನಿರ್ದಿಷ್ಟವಾಗಿ ಹಾಸನ ಜಿಲ್ಲೆಯಲ್ಲಿ ಸಂಭವಿಸುತ್ತಿರುವ ಸರಣಿ ಹೃದಯಾಘಾತ ಸಾವುಗಳ ಹಿನ್ನೆಲೆಯಲ್ಲಿ ಅಧ್ಯಯನಕ್ಕೆ ತಜ್ಞರ ಸಮಿತಿ ರಚಿಸಿತ್ತು.
ಈ ಸಮಿತಿ ಈ ವರ್ಷದ ಏಪ್ರಿಲ್ ಮತ್ತು ಮೇ ನಡುವೆ ಹೃದ್ರೋಗ ಸಮಸ್ಯೆಯಿಂದ ಜಯದೇವ ಆಸ್ಪತ್ರೆಗೆ ದಾಖಲಾಗಿದ್ದ 45 ಮತ್ತು ಅದಕ್ಕಿಂತ ಕಡಿಮೆ ವಯಸ್ಸಿನ 251 ರೋಗಿಗಳನ್ನು ಅಧ್ಯಯನಕ್ಕೆ ಒಳಪಡಿಸಿದ್ದು, ಎರಡು ತಿಂಗಳ ಪ್ರಾಯೋಗಿಕ ಅಧ್ಯಯನದ ನಂತರ ಈ ವರದಿ ಸಲ್ಲಿಸಲಾಗಿದೆ. ಈ ಪೈಕಿ 19 ರೋಗಿಗಳಿಗೆ ಈ ಹಿಂದೆ ಕೋವಿಡ್ ಸೋಂಕು ತಗುಲಿದ್ದರೂ ಮತ್ತು ಬಹುತೇಕ ಎಲ್ಲರೂ (251ರಲ್ಲಿ 249) ಕನಿಷ್ಠ ಒಂದು ಡೋಸ್ ಕೋವಿಡ್ ಲಸಿಕೆ ಪಡೆದಿದ್ದರು. ಆದರೆ ಈ ಅಂಶಗಳು ಹೃದಯಾಘಾತಕ್ಕೆ ನೇರವಾಗಿ ಕಾರಣವಾಗಿವೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ತಜ್ಞರ ಸಮಿತಿ ತೀರ್ಮಾನಿಸಿದೆ.
30 ವರ್ಷಕ್ಕಿಂತ ಕಡಿಮೆ ವಯಸ್ಸಿನ 12 ಹೃದ್ರೋಗಿಗಳ ಬಗ್ಗೆ ಅಧ್ಯಯನ ನಡೆಸಲಾಗಿತ್ತು. 31 ರಿಂದ 40 ವಯಸ್ಸಿನ 66 ಹೃದ್ರೋಗಿಗಳ ಬಗ್ಗೆ ಅಧ್ಯಯನ ಮಾಡಲಾಗಿತ್ತು. ಜೊತೆಗೆ 41 ರಿಂದ 45 ವಯಸ್ಸಿನ 172 ಹೃದ್ರೋಗಿಗಳ ಬಗ್ಗೆ ಅಧ್ಯಯನ ಮಾಡಲಾಗಿತ್ತು. ಒಟ್ಟು 251 ಮಂದಿಗೆ ಆರೋಗ್ಯ ತಪಾಸಣೆ ಮಾಡಲಾಗಿದೆ. 218 ಜನ ಪುರುಷರಿದ್ದು, 33 ಮಹಿಳೆಯರನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. 251 ರೋಗಿಗಳಲ್ಲಿ 87 ಮಂದಿಯಲ್ಲಿ ಮಧುಮೇಹ ಕಂಡುಬಂದಿದೆ. 102 ರೋಗಿಗಳಿಗೆ ಬಿಪಿ, 35 ಕೊಲೆಸ್ಟ್ರಾಲ್ ಇದೆ. 40 ಮಂದಿಗೆ ಹೃದಯ ಸಂಬಂಧಿ ಕಾಯಿಲೆ ಇದೆ. 111 ಮಂದಿ ಧೂಮಪಾನಿಗಳಾಗಿದ್ದಾರೆ. 19 ಮಂದಿಗೆ ಕೊವಿಡ್ ಸೋಂಕೊನ ಹಿನ್ನೆಲೆ ಇತ್ತು. ಇನ್ನುಳಿದ 77 ಮಂದಿಗೆ ಯಾವುದೇ ರೋಗಗಳು ಇರಲಿಲ್ಲ. ನ್ಯೂರಾಲಜಿಕಲ್ ಸಮಸ್ಯೆಯ ಅಧ್ಯಯನ ಬಾಕಿ ಇದ್ದು, ನಿಮ್ಹಾನ್ಸ್ ತಜ್ಞರು ವರದಿ ಕೊಟ್ಟ ಬಳಿಕ ಅಂತಿಮ ವರದಿ ಸಲ್ಲಿಕೆಯಾಗಲಿದೆ.
251 ರೋಗಿಗಳಲ್ಲಿ 19 ರೋಗಿಗಳು ಹಿಂದೆ ಕೋವಿಡ್ ಸೋಂಕು ಹೊಂದಿದ್ದರು; 53 ಜನ ಒಂದು ಡೋಸ್ ಲಸಿಕೆ ಪಡೆದಿದ್ದರು, 180 ಜನ ಎರಡು ಡೋಸ್ ಲಸಿಕೆ ಪಡೆದರೆ, 17 ಜನ ಮೂರು ಡೋಸ್ ಪಡೆದಿದ್ದರು. 2019ಕ್ಕೆ ಹೋಲಿಸಿದರೆ, 40 ವರ್ಷದೊಳಗಿನವರಲ್ಲಿ ಮಧುಮೇಹ (ಶೇ.13.9ರಿಂದ ಶೇ.20.5), ಅಧಿಕ ರಕ್ತದೊತ್ತಡ (ಶೇ.13.9ರಿಂದ ಶೇ.17.6) ಮತ್ತು ಡಿಸ್ಲಿಪಿಡೆಮಿಯಾ(ಶೇ.34.8ರಿಂದ ಶೇ.44.1) ಹೆಚ್ಚಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಯುವಕರು ಹಠಾತ್ ಹೃದಯಾಘಾತದಿಂದ ಸಾವು ಪತ್ತೆಹಚ್ಚಲು ರಾಷ್ಟ್ರೀಯ ನೋಂದಣಿ ಮತ್ತು ಹೃದಯ ಕಣ್ಗಾವಲು ಕಾರ್ಯಕ್ರಮ ಆರಂಭಿಸಿ, ಈ ವಯಸ್ಸಿನ ಗುಂಪಿನಲ್ಲಿ ವಿವರಿಸಲಾಗದ ಸಾವುಗಳಿಗೆ ಶವಪರೀಕ್ಷೆ ಆಧಾರಿತ ವರದಿ ಕಡ್ಡಾಯಗೊಳಿಸಿ, ಆನುವಂಶಿಕ ಹೃದಯ ಕಾಯಿಲೆಗಳನ್ನು ಮೊದಲೇ ಪತ್ತೆಹಚ್ಚಲು ಶಾಲೆಗಳಲ್ಲಿ ನಿಯಮಿತ ಹೃದಯ ತಪಾಸಣೆ ಪ್ರಾರಂಭಿಸಿ, ಜೀವನಶೈಲಿಗೆ ಸಂಬಂಧಿಸಿದ ಹೃದಯ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸಲು ಸಾರ್ವಜನಿಕ ಆರೋಗ್ಯ ಅಭಿಯಾನಗಳನ್ನು ಕೈಗೊಳ್ಳಿ,
“six S” ವಿಧಾನವನ್ನು ಉತ್ತೇಜಿಸಿ – ಹೆಚ್ಚಿದ ದೈಹಿಕ ಚಟುವಟಿಕೆ, ಧೂಮಪಾನವನ್ನು ನಿಲ್ಲಿಸುವುದು, ಸ್ಕ್ರೀನ್ ಟೈಮ್ ಕಡಿಮೆ ಮಾಡುವುದು, ಸಕ್ಕರೆ/ಉಪ್ಪು ಸೇವನೆ ನಿಯಂತ್ರಣ, ಸಾಕಷ್ಟು ನಿದ್ರೆ ಮತ್ತು ಒತ್ತಡ ನಿರ್ವಹಣೆ ಮಾಡಿ ಎಂದು ಈ ಸಮಿತಿ ಶಿಫಾರಸ್ಸು ಮಾಡಿದೆ.
























