ಗಣಪತಿ ವಿಗ್ರಹಕ್ಕೆ ಒದ್ದು, ನಾಗರ ಕಲ್ಲನ್ನು ಚರಂಡಿಗೆ ಎಸೆದಿರುವ ದುಷ್ಕರ್ಮಿಗಳು
ಬೆಂಗಳೂರು: ಶಿವಮೊಗ್ಗ ಜಿಲ್ಲೆಯ ರಾಗಿಗುಡ್ಡದ ಬಂಗಾರಪ್ಪ ಬಡಾವಣೆಯಲ್ಲಿ ಅನ್ಯಕೋಮಿನ ಯುವಕರು ಶನಿವಾರ ಗಣಪತಿ ವಿಗ್ರಹ ಹಾಗೂ ನಾಗರ ಕಲ್ಲಿಗೆ ಅಪಚಾರ ಮಾಡಿರುವ ಘಟನೆಯಿಂದ ಶಿವಮೊಗ್ಗದಲ್ಲಿ ಬಿಗುವಿನ ಪರಿಸ್ಥಿತಿ ಉಂಟಾಗಿದೆ.
ಬಡಾವಣೆಯ ಮುಖ್ಯರಸ್ತೆಯಲ್ಲಿ ಇತ್ತೀಚೆಗೆ ಪ್ರತಿಷ್ಠಾಪನೆ ಮಾಡಿದ್ದ ಗಣಪತಿ ವಿಗ್ರಹಕ್ಕೆ ಒದ್ದು, ನಾಗರ ಕಲ್ಲನ್ನು ಚರಂಡಿಗೆ ಎಸೆದಿರುವ ಆರೋಪ ಕೇಳಿಬಂದಿದೆ. ಅನ್ಯಕೋಮಿನ ಯುವಕರಿಂದ ದುಷ್ಕೃತ್ಯ ನಡೆದಿದೆ ಎನ್ನಲಾಗಿದ್ದು, ಹಿಂದೂ ಮುಖಂಡರು ಕೆರಳಿದ್ದಾರೆ. ಇದರಿಂದ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಹಿಂದೂ ದೇವರುಗಳಿಗೆ ಅಪಚಾರ ಮಾಡಿದ್ದಾರೆ ಎಂದು ಸ್ಥಳೀಯರ ಆಕ್ರೋಶ ಹೊರಹಾಕಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಎಸ್ಪಿ ಜಿ.ಕೆ ಮಿಥುನ್ ಕುಮಾರ್, ಶಿವಮೊಗ್ಗ ಸಬ್ ಡಿವಿಜನ್-2 ಡಿವೈಎಸ್ಪಿ ಸಂಜೀವ್ ಕುಮಾರ್ ದೌಡಾಯಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ.
ಸ್ಥಳೀಯರ ಜೊತೆ ಮಾತುಕತೆ ನಡೆಸಿದ್ದು, ದೂರು ನೀಡುವಂತೆ ಮನವಿ ಮಾಡಿದ್ದಾರೆ. ದೂರು ನೀಡಿ ತಪ್ಪಿತಸ್ಥರನ್ನು ಬಂಧಿಸುತ್ತೇವೆಂದು ಭರವಸೆ ನೀಡಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಘಟನಾ ಸ್ಥಳದಲ್ಲಿ ಪೊಲೀಸ್ ಬಿಗಿ ಭದ್ರತೆ ನಿಯೋಜಿಸಲಾಗಿದೆ.
























