ಭಾರತದ ಜೊತೆಗೆ ಸ್ನೇಹ ಸಂಬಂಧ ಮರು ಸ್ಥಾಪಿಸಲು ಮಾಲ್ಡೀವ್ಸ್ ಪರದಾಟ
ನವದೆಹಲಿ: ಕೆಲ ಸಮಯಗಳ ಹಿಂದೆ ವಿನಾ ಕಾರಣ ಭಾರತದ ಜೊತೆಗೆ ಸಂಬಂಧ ಹಾಳು ಮಾಡಿಕೊಂಡಿದ್ದ ದ್ವೀಪ ರಾಷ್ಟ್ರ ಮಾಲ್ಡಿವ್ಸ್ ಈಗ ಮತ್ತೆ ಭಾರತದ ಜೊತೆಗೆ ಸ್ನೇಹ ಸಂಪಾದನೆ ಮಾಡಲು ಇನ್ನಿಲ್ಲದ ಕಸರತ್ತು ಮಾಡುತ್ತಿದೆ.
ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝಿ ಜುಲೈ 26 ರಂದು ನಡೆಯುವ ಅಲ್ಲಿನ ಸ್ವಾತಂತ್ರ್ಯ ದಿನಾಚರಣೆ ಮುಖ್ಯ ಅತಿಥಿಯಾಗಿ ಭಾಗವಹಿಸಲು ಭಾರತದ ಪ್ರಧಾನಿ ಮೋದಿ ಅವರಿಗೆ ಆಹ್ವಾನ ನೀಡಿದ್ದಾರೆ.
ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಮಾಲ್ಡೀವ್ಸ್ ಅಧ್ಯಕ್ಷ ಮುಯಿಝು ಭಾರತಕ್ಕೆ ಭೇಟಿ ನೀಡಿದ್ದರು. ಈ ಹಿಂದೆ ಭಾರತವನ್ನು ದ್ವೀಪ ರಾಷ್ಟ್ರದಿಂದ ಹೊರಹಾಕುವ ಅಭಿಯಾನದ ಬಳಿಕ ಇದು ಮೊಯಿಝಿ ಅವರ ಮೊದಲ ದ್ವಿಪಕ್ಷೀಯ ಭಾರತ ಭೇಟಿಯಾಗಿತ್ತು. ಈ ಸಂದರ್ಭದಲ್ಲಿ ಭಾರತ ಮತ್ತು ಮಾಲ್ಡೀವ್ಸ್ ದ್ವಿಪಕ್ಷೀಯ ಸಂಬಂಧವನ್ನು ‘ಸಮಗ್ರ ಆರ್ಥಿಕ ಮತ್ತು ಕಡಲ ಭದ್ರತಾ ಪಾಲುದಾರಿಕೆ’ಯಾಗಿ ಪರಿವರ್ತಿಸಲು ಒಪ್ಪಿಕೊಂಡಿದ್ದವು. ಮಾಲ್ಡೀವ್ಸ್ ಎದುರಿಸುತ್ತಿರುವ ಆರ್ಥಿಕ ಸವಾಲುಗಳನ್ನು ನಿಭಾಯಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ದ್ವಿಪಕ್ಷೀಯ ಕರೆನ್ಸಿ ವಿನಿಮಯ ಒಪ್ಪಂದದ ಭಾಗವಾಗಿ ಭಾರತವು 30 ಶತಕೋಟಿ ರೂಪಾಯಿ ಮತ್ತು 400 ಮಿಲಿಯನ್ ಡಾಲರ್‌ಗಳ ರೂಪದಲ್ಲಿ ಬೆಂಬಲವನ್ನು ನೀಡಲು ನಿರ್ಧರಿಸಿತ್ತು.
ಪ್ರಧಾನಿ ಮೋದಿ ಅವರು 2019 ರಲ್ಲಿ ಕೊನೆಯ ಬಾರಿಗೆ ಮಾಲ್ಡಿವ್ಸ್‌ಗೆ ಭೇಟಿ ನೀಡಿದ್ದರು. ಆದರೆ ನವೆಂಬರ್ 2023 ರಲ್ಲಿ, ಮೊಹಮ್ಮದ್ ಮುಯಿಝು ಅಧ್ಯಕ್ಷ ಸ್ಥಾನಕ್ಕೇರಿದ ಬಳಿಕ ಇಂಡಿಯಾ ಔಟ್ ಎಂಬ ಘೋಷಣೆಯನ್ನು ಕೂಗಿದ್ದರು. ಮಾಲ್ಡೀವ್ಸ್‌ನಲ್ಲಿರುವ ಭಾರತೀಯ ರಕ್ಷಣಾ ಸಿಬ್ಬಂದಿಯನ್ನು ಹಿಂತೆಗೆದುಕೊಳ್ಳುವಂತೆಯೂ ಹೇಳಿದ್ದರು. ಜೊತೆಗೆ ತನ್ನ ಬೆಂಬಲವನ್ನು ಚೀನಾಗೆ ಘೋಷಿಸಿದ್ದರು. 2024ರ ಆರಂಭದಲ್ಲಿ, ಮೂರು ವಾಯುಯಾನ ವೇದಿಕೆಗಳಿಂದ ಭಾರತೀಯ ಯೋಧರನ್ನು ಹೊರ ಹಾಕಲಾಗಿತ್ತು.
ಈ ಎಲ್ಲಾ ಕಾರಣಗಳಿಂದ ಭಾರತದ ಜೊತೆಗೆ ಹಳಸಿದ ಸಂಬಂಧವನ್ನು ಮತ್ತೆ ಸರಿಪಡಿಸಲು ಮಾಲ್ಡೀವ್ಸ್ ಹೆಣಗಾಡುತ್ತಿದ್ದು, ಅದಕ್ಕಾಗಿ ಇದೀಗ ಅಲ್ಲಿನ ಸ್ವಾತಂತ್ರ್ಯ ದಿನಾಚರಣೆಯ ಮುಖ್ಯ ಅತಿಥಿಯಾಗಿಯೂ ಭಾರತದ ಪ್ರಧಾನಿಯನ್ನು ಆಹ್ವಾನಿಸಿದೆ.
























