ಬೆಎಂಗಳೂರಿನ ಮನೆ, ನಿವೇಶನ ಇನ್ನಿತರ ಆಸ್ತಿ ಜಪ್ತಿ
ಬೆಂಗಳೂರು : ಚಿನ್ನ ಕಳ್ಳ ಸಾಗಾಟ ಪ್ರಕರಣದಲ್ಲಿ ಬಂಧಿತಳಾಗಿರುವ ನಟಿ ರನ್ಯಾ ರಾವ್ಗೆ ಸೇರಿದ 34.12 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಬೆಂಗಳೂರಿನ ಅರ್ಕಾವತಿ ಬಡವಾಣೆಯಲ್ಲಿನ ನಿವೇಶನ, ವಿಕ್ಟೋರಿಯಾ ಲೇಔಟ್ನಲ್ಲಿನ ಮನೆ, ಅನೇಕಲ್ನಲ್ಲಿನ ಕೃಷಿ ಜಮೀನು ಮತ್ತು ತುಮಕೂರಿನಲ್ಲಿನ ಜಮೀನನ್ನು ಇಡಿ ಜಪ್ತಿ ಮಾಡಿದೆ. ಸಿಬಿಐ ಮತ್ತು ರೆವಿನ್ಯೂ ಗುಪ್ತಚರ ನಿರ್ದೇಶನಾಲಯ (ಡಿಆರ್ಐ) ಒಪ್ಪಿಗೆ ಮೇರೆಗೆ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿಕೊಂಡಿದೆ.
ರನ್ಯಾಳನ್ನು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಳೆದ ಮಾರ್ಚ್ನಲ್ಲಿ ದುಬೈನಿಂದ 12.56 ಕೋಟಿ ರೂ. ಮೌಲ್ಯದ 14.213 ಕೆಜಿ ಚಿನ್ನ ತರುವಾಗ ಕಸ್ಟಮ್ ಅಧಿಕಾರಿಗಳು ಬಂಧಿಸಿದ್ದರು. ಬಳಿಕ ರನ್ಯಾ ನಿವಾಸದ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದಾಗ 2.67 ಕೋಟಿ ಮೌಲ್ಯದ ದಾಖಲೆಗಳಿಲ್ಲದ ಹಣ ಮತ್ತು 2.06 ಕೋಟಿ ಮೌಲ್ಯದ ಚಿನ್ನದ ಆಭರಣಗಳು ಪತ್ತೆಯಾದ್ದವು.
ರನ್ಯಾ ರಾವ್, ತರುಣ್ ಕೊಂಡೂರು ಮತ್ತು ಇತರರು ಸಕ್ರಿಯವಾಗಿ ಚಿನ್ನ ಸ್ಮಗ್ಲಿಂಗ್ ಮಾಡುತ್ತಿದ್ದರು. ದುಬೈ ಮತ್ತು ಉಗಾಂಡಾದ ಪೂರೈಕೆದಾರರಿಂದ ಚಿನ್ನವನ್ನು ಖರೀದಿಸಿ ಹವಾಲಾ ಮೂಲಕ ನಗದು ಪಾವತಿ ಮಾಡುತ್ತಿದ್ದರು. ದುಬೈನಲ್ಲಿ ಚಿನ್ನ ಸಾಗಾಣೆ ಬಗ್ಗೆ ಸುಳ್ಳು ಕಸ್ಟಮ್ಸ್ ಡಿಕ್ಲರೇಷನ್ ಪಡೆಯುತ್ತಿದ್ದರು. ಚಿನ್ನವನ್ನು ಸ್ವಿಜರ್ರ್ಲ್ಯಾಂಡ್, ಯುಎಸ್ಎಗೆ ತೆಗೆದುಕೊಂಡು ಹೋಗುತ್ತೇವೆಂದು ಡಿಕ್ಲರೇಷನ್ ಪಡೆಯುತ್ತಿದ್ದರು ಎಂದು ತನಿಖೆ ವೇಳೆ ತಿಳಿದುಬಂದಿದೆ.
ಎರಡು ಸೆಟ್ ಪ್ರಯಾಣ ದಾಖಲೆಗಳನ್ನು ಬಳಸಿ ಭಾರತಕ್ಕೆ ಚಿನ್ನ ಸಾಗಣೆ ಮಾಡಿದ್ದಾರೆ. ಕಳ್ಳಸಾಗಾಟ ಮೂಲಕ ತಂದ ಚಿನ್ನವನ್ನು ಭಾರತದ ಆಭರಣ ವ್ಯಾಪಾರಿಗಳು ಮತ್ತು ಇತರ ಸ್ಥಳೀಯ ಸಂಸ್ಥೆಗಳಿಗೆ ಮಾರಾಟ ಮಾಡಿದ್ದಾರೆ. ನಂತರ ಹಣವನ್ನು ವಿದೇಶಗಳಿಗೆ ಹವಾಲಾ ಮೂಲಕ ಕಳುಹಿಸುತ್ತಿದ್ದರು. ಹೀಗೆ ಭಾರತಕ್ಕೆ ಹೆಚ್ಚಿನ ಚಿನ್ನವನ್ನು ಕಳ್ಳಸಾಗಣೆ ಮಾಡಲು ಅಕ್ರಮ ಹಣ ವರ್ಗಾಯಿಸಲಾಗುತ್ತಿತ್ತು ಎಂಬ ಮಾಹಿತಿ ತನಿಖೆ ವೇಳೆ ಗೊತ್ತಾಗಿದೆ.
























