ಮುಂಬೈ: ಮರಾಠಾ ಯೋಧ ಪೇಶ್ವೆ ಬಾಜಿರಾವ್ ಉತ್ತಮವಾದ ಸೈನಿಕನ ಗುಣಲಕ್ಷಣಗಳನ್ನು ಹೊಂದಿದ್ದರು. ನಮ್ಮ ದೇಶಕ್ಕಾಗಿ, ಸ್ವಾತಂತ್ರ್ಯಕ್ಕಾಗಿ ಅವರು ಬಹಳಷ್ಟು ಕೆಲಸಗಳನ್ನು ಮಾಡಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳಿದ್ದಾರೆ.
ಪುಣೆಯಲ್ಲಿ ಯೋಧ ಪೇಶ್ವೆ ಬಾಜಿರಾವ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಿ ಬಳಿಕ ಮಾತನಾಡಿದ ಅವರು, ಬಾಜಿರಾವ್ ಅವರು ತಮ್ಮ 21 ನೇ ವರ್ಷದಲ್ಲಿ 41 ಯುದ್ಧಗಳಲ್ಲಿ ಭಾಗವಹಿಸಿದ್ದರು. ಅವರ ಈ ದಾಖಲೆಯನ್ನು ಮುರಿಯುವುದು ಯಾರಿಂದಲೂ ಸಾಧ್ಯವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಛತ್ರಪತಿ ಶಿವಾಜಿ ಅವರ ನಂತರದಲ್ಲಿ ಅವರ ಪರಂಪರೆಯನ್ನು ಪೇಶ್ವೆ ಬಾಜಿರಾವ್ ಮುಂದುವರೆಸಿಕೊಂಡು ಹೋದ ದೇ ಇರುತ್ತಿದ್ದರೆ ನಮ್ಮ ದೇಶದ ಮೂಲಸ್ವರೂಪವೇ ಮರೆಯಾಗುತ್ತಿತ್ತು. ದೇಶಕ್ಕೆ ಸಂಬಂಧಿಸಿದ ಹಾಗೆ ಬಾಜಿರಾವ್ ಅವರ ದೂರದೃಷ್ಟಿತ್ವವನ್ನು ಮುಂದುವರಿಸಿಕೊಂಡು ಹೋಗುವುದು ಭಾರತೀಯರೆಲ್ಲರ ಕರ್ತವ್ಯ ಎಂದು ಅಮಿತ್ ಶಾ ತಿಳಿಸಿದ್ದಾರೆ.
























