ಸಹೋದರನೊಡನೆ ಜಗಳವಾಡಿ ಮನೆಯಲ್ಲಿದ್ದ ಶೋಕೇಸನ್ನು ಬರಿ ಕೈಯಿಂದ ಒಡೆದು ಹಾಕಿ ದುರಂತ
ಮಂಗಳೂರು : ಶರಾಬಿನ ಮತ್ತಿನಲ್ಲಿ ಮನೆಯಲ್ಲಿದ್ದ ಗಾಜಿನ ಶೋಕೇಸ್ ಒಡೆದು ತೀವ್ರ ಗಾಯಗೊಂಡು ರಕ್ತಸ್ರಾವದಿಂದ ವ್ಯಕ್ತಿಯೊಬ್ಬ ಸಾವನ್ನಪ್ಪಿದ ಘಟನೆ ಉಳ್ಳಾಲ ಸಮೀಪದ ಮದೂರು ಸೈಟ್‌ನಲ್ಲಿ ಗುರುವಾರ ರಾತ್ರಿ ಸಂಭವಿಸಿದೆ. ಮೃತನನ್ನು ಮದೂರು ಸೈಟ್ ನಿವಾಸಿ ಸತೀಶ್ ನಾಯಕ್ ಅವರ ಪುತ್ರ ನಿತೇಶ್ ನಾಯಕ್ (28) ಎಂದು ಗುರುತಿಸಲಾಗಿದೆ.
ನಿತೇಶ್ ತಂದೆ ಮತ್ತು ಸಹೋದರನೊಂದಿಗೆ ಆಗಾಗ್ಗೆ ಜಗಳವಾಡುತ್ತಿದ್ದನು. ಗುರುವಾರ ರಾತ್ರಿ ಭಾರಿ ಸಿಟ್ಟಿನಲ್ಲಿದ್ದ ನಿತೇಶ್ ಮನೆಯೊಳಗಿದ್ದ ಶೋಕೇಸ್ ಗಾಜನ್ನು ಒಡೆದಿದ್ದಾನೆ ಎನ್ನಲಾಗಿದೆ. ಒಡೆದ ಗಾಜು ಅವನ ಕೈಯ ಪ್ರಮುಖ ನರಕ್ಕೆ ತಗುಲಿ ವಿಪರೀತ ರಕ್ತಸ್ರಾವವಾಗಿ ಸಾವು ಸಂಭವಿಸಿದೆ.
ನಿತೇಶ್ ಮತ್ತು ಅವನ ಸಹೋದರ ಸೇರಿ ಫುಡ್‌ಸ್ಟಾಲ್ ವ್ಯವಹಾರ ನಡೆಸುತ್ತಿದ್ದರು. ನಿನ್ನೆ ತಡರಾತ್ರಿ ಕೆಲಸ ಮುಗಿಸಿ ಮನೆಗೆ ಹಿಂದಿರುಗಿದಾಗ ಈ ಜಗಳ ಸಂಭವಿಸಿದೆ ಎಂದು ತಿಳಿದುಬಂದಿದೆ. ನಿತೇಶ್‌ಗೆ ವಿವಾಹವಾಗಿದ್ದರೂ ಪತ್ನಿಯಿಂದ ಬೇರೆಯಾಗಿದ್ದ. ತಾಯಿ ನೀಡಿದ ದೂರಿನ ಆಧಾರದ ಮೇಲೆ, ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
























