ಧಾರ್ಮಿಕ ಕ್ಷೇತ್ರಗಳಿಗೆ ಧಾರ್ಮಿಕ ಭಾವನೆಯಿಂದಲೇ ಭೇಟಿ ನೀಡಬೇಕು
ಮೈಸೂರು: ಚಾಮುಂಡಿ ಬೆಟ್ಟಕ್ಕೆ ಆಗಮಿಸುವ ಭಕ್ತರಿಗೂ ವಸ್ತ್ರ ಸಂಹಿತೆ ಜಾರಿಯಾಗಬೇಕು ಎಂದು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅಭಿಪ್ರಾಯ ಪಟ್ಟಿದ್ದಾರೆ.
ಈ ಸಂಬಂಧ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಜನರು ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿದಾಗ ಅವರ ಮನಸ್ಸು ಸಹ ಧಾರ್ಮಿಕ ಭಾವನೆಯಿಂದಲೇ ಇರುವಂತಾಗಬೇಕು ಎಂದು ಅವರು ಹೇಳಿದ್ದಾರೆ.
ದೇವಾಲಯಗಳಲ್ಲಿ ಮೊಬೈಲ್ ಬಳಕೆ ನಿರ್ಬಂಧಿಸಬೇಕು. ಈ ಕ್ರಮ ತಿರುಪತಿಯಲ್ಲಿ ಈಗಾಗಲೇ ಇದೆ. ಇದನ್ನು ಚಾಮುಂಡಿ ಬೆಟ್ಟದಲ್ಲೂ ಅಳವಡಿಸಬೇಕು. ಪ್ರಸ್ತುತ ದಿನಗಳಲ್ಲಿ ಕೆಲವು ಮಂದಿ ತಿಳಿದು, ತಿಳಿಯದೆಯೋ ಚಾಮುಂಡಿ ತಾಯಿಯ ಮೂಲ ವಿಗ್ರಹದ ಫೋಟೋ ತೆಗೆಯುವುದು, ವಿಡಿಯೋ ಮಾಡುವುದು ಮಾಡುತ್ತಿದ್ದಾರೆ. ಇದರಿಂದಾಗಿ ಕ್ಷೇತ್ರದ ಪಾವಿತ್ರ್ಯತೆ ನಾಶವಾಗುತ್ತದೆ ಎಂದು ಅವರು ನುಡಿದಿದ್ದಾರೆ.
























