ಮತ್ತೆ ವಿವಾದವನ್ನು ಮೈಮೇಲೆ ಎಳೆದುಕೊಂಡ ಎಂಎಲ್‌ಸಿ ರವಿಕುಮಾರ್‌

ಶಾಲಿನಿ ರಜನೀಶ್‌ವಿರುದ್ಧ ಆಕ್ಷೇಪಾರ್ಹ ಹೇಳಿಕೆ ವಿರುದ್ಧ ಎಫ್‌ಐಆರ್‌

ಬೆಂಗಳೂರು: ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಜೂನ್ 30ರಂದು ನಡೆದ ಬಿಜೆಪಿ ಪ್ರತಿಭಟನೆ ವೇಳೆ ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಬಗ್ಗೆ ರವಿಕುಮಾರ್ ಅವಹೇಳನಕಾರಿಯಾಗಿ ಮಾತಾಡಿದ್ದಾರೆನ್ನಲಾದ ವಿಡಿಯೋ ವೈರಲ್ ಆಗಿದೆ. ರವಿಕುಮಾರ್ ಅವರದ್ದೆನ್ನಲಾದ ಈ ಹೇಳಿಕೆ ಬಿಜೆಪಿಗೆ ಭಾರಿ ಮುಜುಗರ ತಂದಿದೆ. ನಿನ್ನೆ ಮಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಅವರ ವಿರುದ್ಧ ಕಾಂಗ್ರೆಸ್‌ ಪ್ರತಿಭಟನೆ ನಡೆಸಿದೆ.

ಈಗ ಶಾಲಿನಿ ರಜನೀಶ್‌ ವಿರುದ್ಧ ಆಡಿದ್ದಾರೆನ್ನಲಾದ ಮಾತು ಬಿಜೆಪಿ ಹಿರಿಯರ ಅಸಮಧಾನಕ್ಕೂ ಕಾರಣವಾಗಿದೆ. ಇಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಷಿಯವರನ್ನು ಬಿಜೆಪಿ ಕಚೇರಿಯಲ್ಲಿ ಭೇಟಿ ಮಾಡಿ ರವಿಕುಮಾರ್ ಸ್ಪಷ್ಟೀಕರಣ ಕೊಡಲಿದ್ದಾರೆ. ಪದೇಪದೆ ಇಂಥ ಹೇಳಿಕೆ ನೀಡಿ ಪಕ್ಷಕ್ಕೆ ಮುಜುಗರ ತಂದಿದ್ದೀರಿ ಎಂದು ಪಕ್ಷದಲ್ಲೂ ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.





















































 
 

ಬುಧವಾರವೇ ಈ ಸಂಬಂಧ ಯೂತ್ ಕಾಂಗ್ರೆಸ್‌ನಿಂದ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ಕೊಡಲಾಗಿದೆ. ಮಹಿಳಾ ಆಯೋಗ ಹಾಗೂ ಸಭಾಪತಿ ಹೊರಟ್ಟಿಗೂ ದೂರು ಕೊಡಲಾಗಿದೆ. ವಿಧಾನ ಪರಿಷತ್​ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಜೂನ್‌ 30 ರಂದು ವಿಧಾನಸೌಧದ ಗಾಂಧಿ ಪ್ರತಿಮೆಯ ಬಳಿ ಪ್ರತಿಭಟಿಸುತ್ತಿರುವ ವೇಳೆ ಉಪ ಪೊಲೀಸ್​ ಆಯುಕ್ತ (ವಿಧಾನಸೌಧ ಭದ್ರತೆ) ಎಂ.ಎನ್​ ಕರಿಬಸವನಗೌಡ ಅವರೊಂದಿಗೆ ಮಾತನಾಡುತ್ತಿರುವಾಗ ರವಿಕುಮಾರ್ ಶಾಲಿನಿ ರಜನೀಶ್ ʼರಾತ್ರಿಯಿಡೀ ಸರ್ಕಾರಕ್ಕೆ, ಇಡೀ ದಿನ ಸಿಎಂಗಾಗಿ ಕೆಲಸ ಮಾಡುತ್ತಾರೆʼ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಯ ವಿಡಿಯೋ ಹರಿದಾಡಲು ಆರಂಭವಾಗುತ್ತಿದ್ದಂತೆ ಇದೀಗ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್​ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಹೇಳಿಕೆ ನಿರಾಕರಿಸಿದ ರವಿಕುಮಾರ್‌

ತಾನು ಶಾಲಿನಿ ರಜನೀಶ್‌ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿಲ್ಲ ಎಂದು ರವಿಕುಮಾರ್‌ ಸ್ಪಷ್ಟನೆ ನೀಡಿದ್ದಾರೆ. ಇಂಥ ಹೇಳಿಕೆ ನೀಡಿದ್ದರೆ ನನ್ನನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಿ. ಶಾಲಿನಿ ರಜನೀಶ್‌ ಬಗ್ಗೆ ಅಪಾರ ಗೌರವವಿದೆ. ಅವರ ಕಾರ್ಯಭಾರ ಹೆಚ್ಚು ಇದೆ ಎಂಬ ಅರ್ಥದಲ್ಲಿ ಮಾತನಾಡಿದ್ದೆ ಎಂದು ರವಿಕುಮಾರ್‌ ಹೇಳಿದ್ದಾರೆ.

error: Content is protected !!
Scroll to Top