ಪುತ್ತೂರು : ದೈಹಿಕ ಸಂಪರ್ಕ ಬೆಳೆಸಿ ಬಳಿಕ ವಂಚಿಸಿದ ಪ್ರಕರಣ ಸಂಬಂಧಿಸಿದ ಸಂತ್ರಸ್ತೆ ಮನೆಗೆ ರಾಜ್ಯ ಹಿಂದುಳಿದ ವರ್ಗ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ ಗುರುವಾರ ಸಂಜೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಾ ಕುಳಾಯಿ, ಈ ವಿಚಾರದಲ್ಲಿ ಕಾನೂನು ಸಂಘರ್ಷವೇ ಪರಿಹಾರವಲ್ಲ. ಮಾತುಕತೆ ಮೂಲಕ ಯುವತಿ-ಯುವಕನನ್ನು ಒಂದು ಮಾಡಿ ಮದುವೆ ಮಾಡಿಸಬೇಕಾಗಿದೆ. ಈ ನಿಟ್ಟಿನಲ್ಲಿ ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.
ತಾಯಿ ಮಗುವಿನ ಹಣಕಾಸು ಖರ್ಚನ್ನು ನಾನು ಸಂಪೂರ್ಣ ಭರಿಸಲಿದ್ದೇನೆ. ಅಗತ್ಯವಿದ್ದರೆ ಕಾನೂನಿನ ಎಲ್ಲಾ ನೆರವನ್ನು ಕಲ್ಪಿಸುತ್ತೇನೆ. ಇದಕ್ಕಿಂತಲೂ ಹೆಚ್ಚಾಗಿ ಅವರಿಬ್ಬರ ಮದುವೆ ಮಾಡುವ ನಿಟ್ಟಿನಲ್ಲಿ ಯುವಕನ ಹೆತ್ತವರ ಜತೆಗೂ ಮಾತನಾಡಿ ಅವರ ಮನವೊಲಿಸುವ ಕೆಲಸ ಮಾಡುತ್ತೇನೆ ಎಂದರು.
ನಾನು ಎಲ್ಲಾ ಹಿಂದೂ ಸಂಘಟನೆಗಳಿಗೆ ಮನವಿ ಮಾಡುತ್ತಿದ್ದು, ಎಲ್ಲರೂ ಯುವತಿಯ ಪರ ನಿಲ್ಲಬೇಕು ಎಂದು ವಿನಂತಿಸಿದರು. ಗೋವುಗಳ ರಕ್ಷಣೆಗೆ ಆದ್ಯತೆ ನೀಡುವ ನೀವು ದಯವಿಟ್ಟು ಒಬ್ಬ ಹೆಣ್ಣು ಮಗಳಿಗೆ ನ್ಯಾಯ ನೀಡಲು ಪ್ರಯತ್ನಿಸಿ ಎಂದು ಹೇಳಿದ ಅವರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಣ್ಣು ಮಕ್ಕಳ ಸ್ಥಿತಿ ಗೋವಿಂಗಿಂತಲೂ ಕಡೆಯಾಯಿತೇ ಎಂದು ಪ್ರಶ್ನಿಸಿದರು.
























