ಡೆಡ್‌ಲೈನ್ ಒಳಗೆ ಅರ್ಜಿ ಹಿಂಪಡೆಯದಿದ್ದರೆ ರಾಜೀನಾಮೆ ಅಂಗೀಕಾರ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಸಾರ್ವಜನಿಕ ವೇದಿಕೆಯಲ್ಲಿ ಅವಮಾನಕ್ಕೊಳಗಾಗಿದ್ದ ಹಿನ್ನೆಲೆಯಲ್ಲಿ ಧಾರವಾಡ ಎಎಸ್‌ಪಿ ನಾರಾಯಣ ಬರಮಣ್ಣಿ ಸ್ವಯಂ ನಿವೃತ್ತಿ ಕೋರಿ ಸಲ್ಲಿಸಿದ್ದ ಮನವಿಯನ್ನು ಸ್ವೀಕರಿಸಲು ಸರ್ಕಾರ ಸೂಚನೆ ನೀಡಿದೆ.
ಉನ್ನತ ಪೊಲೀಸ್ ಅಧಿಕಾರಿಯನ್ನು ಕಾಂಗ್ರೆಸ್ ಸಭೆಯ ವೇದಿಕೆಯಲ್ಲಿ ಸಾರ್ವಜನಿಕರ ಎದುರೇ ಹೀನಾಯವಾಗಿ ನಡೆಸಿಕೊಂಡ ಕುರಿತು ಭಾರಿ ಟೀಕೆ ವ್ಯಕ್ತವಾಗಿದ್ದರೂ ಸರ್ಕಾರ ರಾಜೀನಾಮೆ ಅಂಗೀಕರಿಸಲು ಸೂಚನೆ ನೀಡಿರುವುದು ಆಶ್ಚರ್ಯ ಮೂಡಿಸಿದೆ.
ಗೃಹ ಇಲಾಖೆ ನಾರಾಯಣ ಬರಮಣ್ಣಿ ಅವರ ಸ್ವಯಂ ನಿವೃತ್ತಿ ಮನವಿಯನ್ನು ಅಂಗೀಕರಿಸಲು ಸೂಚನೆ ನೀಡಿದೆ ಎಂದು ತಿಳಿದುಬಂದಿದೆ. ಜುಲೈ 6ಕ್ಕೆ ಡೆಡ್‌ಲೈನ್ ಫಿಕ್ಸ್ ಮಾಡಿದ್ದು, ಅಷ್ಟರೊಳಗೆ ವಿಆರ್‌ಎಸ್ ಪತ್ರ ವಾಪಸ್ ಪಡೆಯದೆ ಇದ್ದರೆ ಸ್ವಯಂ ನಿವೃತ್ತಿ ಅಂಗೀಕರಿಸುವಂತೆ ಸೂಚನೆ ನೀಡಲಾಗಿದೆ.
ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್‌ನ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆಯೇ ಸಿದ್ದರಾಮಯ್ಯ ಪೊಲೀಸ್ ಅಧಿಕಾರಿಯ ಕಪಾಲಕ್ಕೆ ಹೊಡೆಯಲು ಕೈಎತ್ತಿದ್ದರು. ಈ ಘಟನೆಯಿಂದ ನಾರಾಯಣ ಬರಮಣ್ಣಿ ನೊಂದುಕೊಂಡಿದ್ದರು. ಬಳಿಕ ಅವರನ್ನು ಬೆಳಗಾವಿಯಿಂದ ಧಾರವಾಡಕ್ಕೆ ವರ್ಗಾಯಿಸಲಾಗಿತ್ತು.
ನಾರಾಯಣ ಬರಮಣ್ಣಿ ಸ್ವಯಂ ನಿವೃತ್ತಿ ಕೋರಿ ಅರ್ಜಿ ಸಲ್ಲಿಸಿದ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಸಿದ್ದರಾಮಯ್ಯನವರ ನಡೆಗೆ ಮತ್ತೊಮ್ಮೆ ಟೀಕೆ ವ್ಯಕ್ತವಾಗಿತ್ತು. ಬಿಜೆಪಿ ಮತ್ತು ಜೆಡಿಎಸ್ ಸೋಷಿಯಲ್ ಮೀಡಿಯಾಗಳಲ್ಲಿ ಈ ವಿಚಾರವನ್ನು ಉಲ್ಲೇಖಿಸಿ ಟ್ವೀಟ್ ಮಾಡಿ ರಾಜ್ಯದಲ್ಲಿ ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳಿಗೆ ನಿರಂತರ ಕಿರುಕುಳ ನೀಡಲಾಗುತ್ತಿದ್ದು, ಕರ್ತವ್ಯ ನಿರ್ವಹಿಸದ ಸ್ಥಿತಿ ನಿರ್ಮಾಣವಾಗಿದೆ ಎಂದು ಟೀಕಿಸಲಾಗಿತ್ತು.
























