ಬೆಳಗಾವಿಯ ಸಾಧನಾ ಸಮಾವೇಶದಲ್ಲಿ ಪೊಲೀಸ್ ಅಧಿಕಾರಿಗೆ ಅವಮಾನ ಮಾಡಿದ್ದ ಸಿಎಂ
ಬೆಂಗಳೂರು: ಕಾಂಗ್ರೆಸ್‌ನ ಸಮಾವೇಶದ ವೇದಿಕೆಯಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಅವಮಾನಕ್ಕೊಳಗಾಗಿದ್ದ ಹಿರಿಯ ಪೊಲೀಸ್ ಅಧಿಕಾರಿ ಪ್ರಸ್ತುತ ಧಾರವಾಡದ ಎಎಸ್‌ಪಿ ಆಗಿರುವ ನಾರಾಯಣ ಬರಮಣ್ಣಿ ಸ್ವಯಂ ನಿವೃತ್ತಿಗೆ ಮನವಿ ಮಾಡಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಬೆಳಗಾವಿಯಲ್ಲಿ ಕೆಲ ಸಮಯದ ಹಿಂದೆ ನಡೆದ ಕಾಂಗ್ರೆಸ್‌ನ ಸಾಧನಾ ಸಮಾವೇಶದ ವೇದಿಕೆಯಲ್ಲಿ ಆಗ ಬೆಳಗಾವಿಯಲ್ಲಿ ಕರ್ತವ್ಯದಲ್ಲಿದ್ದ ನಾರಾಯಣ ಬರಮಣ್ಣಿ ಅವರಿಗೆ ಹೊಡೆಯಲು ಸಿದ್ದರಾಮಯ್ಯ ಕೈ ಎತ್ತಿದ್ದರು. ಈ ವೀಡಿಯೊ ಭಾರಿ ವೈರಲ್ ಆಗಿ ಸಿದ್ದರಾಮಯ್ಯ ಟೀಕೆಗಳನ್ನು ಎದುರಿಸಿದ್ದರು.
ಬೆಳಗಾವಿಯ ಸಾಧನಾ ಸಮಾವೇಶದ ಸಭಾಂಗಣಕ್ಕೆ ಕಪ್ಪು ಪಟ್ಟಿ ಧರಿಸಿ ಬಂದಿದ್ದ ಬಿಜೆಪಿಯ ಕೆಲವು ಮಹಿಳಾ ಕಾರ್ಯಕರ್ತರು ಸಿದ್ದರಾಮಯ್ಯ ಭಾಷಣ ಮಾಡಲು ಮುಂದಾಗುತ್ತಿದ್ದಂತೆ ಧಿಕ್ಕಾರ ಕೂಗಿದ್ದರು. ಇದು ಸಿದ್ದರಾಮಯ್ಯನವರಿಗೆ ತೀವ್ರ ಮುಜುಗರವುಂಟು ಮಾಡಿತ್ತು. ಕೂಡಲೇ ಸಿದ್ದರಾಮಯ್ಯ ಭದ್ರತೆಯ ಉಸ್ತುವಾರಿ ನೋಡಿಕೊಂಡಿದ್ದ ಬರಮಣ್ಣಿ ಅವರನ್ನು ವೇದಿಕೆಗೆ ಕರೆದು ದಬಾಯಿಸಿ ಕಪಾಲಕ್ಕೆ ಹೊಡೆಯಲು ಮುಂದಾಗಿದ್ದರು.
ಈ ಘಟನೆ ಬಳಿಕ ಬರಮಣ್ಣಿ ಬಹಳ ನೊಂದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ಸ್ವಯಂ ನಿವೃತ್ತಿಯ ನಿರ್ಧಾರ ಕೈಗೊಂಡಿದ್ದಾರೆಯೇ ಎಂಬ ಪ್ರಶ್ನೆ ಮೂಡಿದೆ. ಹಿರಿಯ ಅಧಿಕಾರಿಗಳು ಸಿಎಂ ಸಮ್ಮುಖದಲ್ಲಿ ಅಧಿಕಾರಿಯ ಮನವೊಲಿಸಲು ಪ್ರಯತ್ನಿಸಿದ್ದಾರೆ. ಮನವೊಲಿಕೆಯಿಂದ ಅಧಿಕಾರಿ ಬರಮಣ್ಣಿ ಅವರು ಸ್ವಲ್ಪಮಟ್ಟಿಗೆ ಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.
























