ಬೆಳ್ತಂಗಡಿ : ಗುರುವಾಯನಕೆರೆ ಕಾರ್ಕಳ ರಸ್ತೆಯಲ್ಲಿ ಹೊಂಡ – ಗುಂಡಿಗಳು ನಿರ್ಮಾಣಗೊಂಡಿದೆ . ಇದರಿಂದಾಗಿ ವಾಹನ ಅವಘಡಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲಿದ್ದು, ವಾಹನ ಸವಾರರು ಹಾಗೂ ಪಾದಚಾರಿಗಳು ತೊಂದರೆ ಅನುಭವಿಸುವ ಪರಿಸ್ಥಿತಿ ಉಂಟಾಗಿದೆ.
ಮಳೆ ಬಂದ ಸಂದರ್ಭದಲ್ಲಿ ಹೊಂಡಗಳಲ್ಲಿ ನೀರು ತುಂಬಿದಾಗ , ಗುಂಡಿಯ ಆಳ ತಿಳಿಯದೆ ದ್ವಿಚಕ್ರ ವಾಹನಗಳನ್ನು ಒಳಗೊಂಡಂತೆ ಇತರ ಸಣ್ಣ-ಪುಟ್ಟ ವಾಹನಗಳು ಬಿದ್ದು ಸವಾರರು ಗಾಯಗೊಳ್ಳುತ್ತಿರುವುದು ದಿನನಿತ್ಯವೂ ಸಂಭವಿಸುತ್ತಿದೆ .
ಹೊಂಡ – ಗುಂಡಿಗಳ ದುರಸ್ತಿ ಕುರಿತು ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಸಾರ್ವಜನಿಕರು ಮನವಿ ನೀಡಿದ್ದು, ಮಳೆ ಕಡಿಮೆಯಾಗದೆ ಯಾವುದೇ ದುರಸ್ತಿ ಮಾಡಲು ಸಾಧ್ಯವಿಲ್ಲವೆಂದು ಉತ್ತರಿಸಿದ್ದಾರೆ. ಮಳೆ ಕಡಿಮೆಯಾದ ಸಮಯದಲ್ಲಿ ದುರಸ್ತಿಯ ಕುರಿತು ಯಾವುದೇ ರೀತಿಯ ಕ್ರಮ ಕೈಗೊಳ್ಳುತ್ತಿಲ್ಲವೆಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.
ಮಾತ್ರವಲ್ಲದೇ ಉಪ್ಪಿನಂಗಡಿ ಹೆದ್ದಾರಿಯಲ್ಲೂ ಇದೇ ರೀತಿಯ ಸಂಕಷ್ಟ ಎದುರಾಗಿದ್ದು, ವಾಹನ ಸವಾರರು ಸಂಚರಿಸುವಾಗ ಗುಂಡಿಯನ್ನು ತಪ್ಪಿಸಲು ಮತ್ತು ವೇಗವಾಗಿ ಹೋಗಬೇಕೆಂಬ ಉದ್ದೇಶದಿಂದ ಇತರೆ ವಾಹನಗಳಿಗೆ ಡಿಕ್ಕಿ ಹೊಡೆದ ಉದಾಹರಣೆಗಳು ಇದೆ. ಹೀಗಾಗಿ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಹೆದ್ದಾರಿಯ ದುರಸ್ತಿಗೆ ಸಂಬಂಧಪಟ್ಟ ಕ್ರಮಗಳನ್ನು ಶೀಘ್ರವಾಗಿ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
























