ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ ತೀರ್ಪಿನಿಂದ ರಾಜ್ಯ ಸರ್ಕಾರಕ್ಕೆ ತೀವ್ರ ಮುಖಭಂಗ
ಬೆಂಗಳೂರು 1: ಐಪಿಎಲ್ ಆರ್‌ಸಿಬಿ ವಿಜಯೋತ್ಸವ ಸಂದರ್ಭ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 11 ಜನರ ಸಾವಿಗೆ ಕಾರಣವಾಗಿದ್ದ ಕಾಲ್ತುಳಿತ ಘಟನೆಗೆ ಹೊಣೆಯಾಗಿಸಿ ಐಪಿಎಸ್ ಅಧಿಕಾರಿ ವಿಕಾಸ್ ಕುಮಾರ್ ಅವರನ್ನು ಅಮಾನತು ಮಾಡಿದ ನಿರ್ಧಾರವನ್ನು ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ ಮಂಗಳವಾರ ರದ್ದುಪಡಿಸಿ ಆದೇಶಿಸಿದೆ. ನ್ಯಾಯಮೂರ್ತಿ ಬಿ.ಕೆ ಶ್ರೀವಾತ್ಸವ ಮತ್ತು ಸಂತೋಷ್ ಮೆಹ್ರಾ ಅವರಿದ್ದ ಪೀಠ ಈ ಆದೇಶ ನೀಡಿದೆ. ಅವರಿಗೆ ಹಿಂದಿನ ಎಲ್ಲ ಭತ್ಯೆ, ಸೌಲಭ್ಯ ಒದಗಿಸಲು ನಿರ್ದೇಶನ ನೀಡಿದೆ. ವಿಕಾಸ್ ಕುಮಾರ್ ಪರ ಹಿರಿಯ ವಕೀಲ ಧ್ಯಾನ್ ಚಿನ್ನಪ್ಪ ವಾದಿಸಿದ್ದರು. ಇದರೊಂದಿಗೆ ಸರ್ಕಾರಕ್ಕೆ ಈ ಪ್ರಕರಣದಲ್ಲಿ ತೀವ್ರ ಮುಖಭಂಗವಾಗಿದೆ.
ಜೂನ್ 3ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ವಿಜಯೋತ್ಸವ ಕಾರ್ಯಕ್ರಮಕ್ಕೆ ಕ್ರೀಡಾಂಗಣಕ್ಕೆ ಲಕ್ಷಾಂತರ ಅಭಿಮಾನಿಗಳು ಆಗಮಿಸಿದ್ದರು. ಆ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸಿ 11 ಮಂದಿ ಮೃತಪಟ್ಟಿದ್ದರು. ಪ್ರಕರಣ ಸಂಬಂಧ ರಾಜ್ಯ ಸರ್ಕಾರ ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿದ್ದ ವಿಕಾಸ್ ಕುಮಾರ್ ಸಹಿತ ಕೆಲವು ಪೊಲೀಸರನ್ನು ಅಮಾನತಗೊಳಿಸಿತ್ತು. ಈ ಅಮಾನತು ಪ್ರಶ್ನಿಸಿ ವಿಕಾಸ್ ಕುಮಾರ್ ಅವರು ಸಿಎಟಿ ಮೊರೆ ಹೋಗಿದ್ದರು. ವಿಕಾಸ್ ಕುಮಾರ್ ಅವರ ಅಮಾನತು ಆದೇಶ ಹಿಂಪಡೆಯುವಂತೆ ರಾಜ್ಯ ಸರ್ಕಾರಕ್ಕೆ ಸಿಎಟಿ ನಿರ್ದೇಶನ ನೀಡಿರುವುದರಿಂದ, ಪೊಲೀಸ್ ಆಯುಕ್ತ ಬಿ ದಯಾನಂದ ಹಾಗೂ ಇತರರ ಅಮಾನತು ಆದೇಶ ಏನಾಗಲಿದೆ ಎಂಬ ಕುತೂಹಲ ಮೂಡಿದೆ.
ಘಟನೆಗೆ ಸಂಬಂಧಿಸಿ ಆರ್‌ಸಿಬಿ ಮಾರ್ಕೆಟಿಂಗ್ ಹೆಡ್ ನಿಖಿಲ್ ಸೋಸಲೆ, ಸುನಿಲ್ ಮ್ಯಾಥ್ಯೂ, ಕಿರಣ್, ಶಮಂತ್ ಅವರನ್ನು ಬಂಧಿಸಿದ್ದ ಸಿಐಡಿ ಅಧಿಕಾರಿಗಳು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಬಂಧಿತರನ್ನು ಕಸ್ಟಡಿಗೆ ಒಪ್ಪಿಸಲು ನಿರಾಕರಿಸಿದ್ದ ನ್ಯಾಯಾಲಯ, ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿತ್ತು. ಈ ವಿಚಾರದಲ್ಲೂ ರಾಜ್ಯ ಸರ್ಕಾರಕ್ಕೆ ಹಿನ್ನಡೆಯಾಗಿತ್ತು.
























