ಪುತ್ತೂರು: ಸುನಿ ಸಿನಿಮಾಸ್ (ಸಿಂಪಲ್ ಸುನಿ) ಅರ್ಪಿಸುವ ಸಹ್ಯಾದ್ರಿ ಸ್ಟುಡಿಯೋಸ್ ನಿರ್ಮಾಣದ ‘ಜಂಗಲ್ ಮಂಗಲ್’ ಕನ್ನಡ ಸಿನಿಮಾ ಜುಲೈ 4 ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ ಎಂದು ಸಿನಿಮಾ ನಿರ್ದೇಶಕ ರಕ್ಷಿತ್ ಕುಮಾರ್ ತಿಳಿಸಿದ್ದಾರೆ.
ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಂಪೂರ್ಣ ಚಿತ್ರೀಕರಣ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮಡಪ್ಪಾಡಿಯಲ್ಲಿ 30 ದಿನಗಳ ಕಾಲ ನಡೆದಿದ್ದು, ಸುತ್ತ ದಟ್ಟ ಕಾಡಿನಿಂದ ಸುತ್ತುವರೆದು, ಕಾಡಿನೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಸಣ್ಣ ಊರೊಂದರಲ್ಲಿ ನಡೆಯುವ ಮಜವಾದ ಘಟನೆಯನ್ನು ಒಳಗೊಂಡಿರುವ ಚಿತ್ರ ಇದಾಗಿದೆ. ರಾಜ್ಯಾದ್ಯಂತ ತೆರೆ ಕಂಡ ಬಳಿಕ ಮುಂದಿನ ದಿನಗಳಲ್ಲಿ ಬಾಂಬೆ, ದುಬೈಯಲ್ಲೂ ಚಿತ್ರ ತೆರೆಗೆ ಬಿಡುವ ಯೋಜನೆಯನ್ನು ಹಾಕಿಕೊಂಡಿದ್ದೇವೆ ಎಂದು ತಿಳಿಸಿದರು.
ಚಿತ್ರದ ತಾರಾಗಣದಲ್ಲಿ ನಾಯಕ ನಟನಾಗಿ ಯಶ್ ಶೆಟ್ಟಿ, ನಾಯಕಿ ನಟಿಯಾಗಿ ಹರ್ಷಿತಾ ರಾಮಚಂದ್ರ ನಟಿಸಿದ್ದು, ಉಗ್ರಂ ಮಂಜು, ಬಲ ರಾಜವಾಡಿ, ದೀಪಕ್ ರೈ ಪಾಣಾಜೆ, ಚಂದ್ರಹಾಸ್ ಉಳ್ಳಾಲ್ ಮುಂತಾದವರು ಅಭಿನಯಿಸಿದ್ದಾರೆ ಎಂದು ತಿಳಿಸಿದರು.
ಛಾಯಾಗ್ರಹಣದಲ್ಲಿ ವಿಷ್ಣುಪ್ರಸಾದ್, ಸಂಗೀತದಲ್ಲಿ ಪ್ರಸಾದ್ ಶೆಟ್ಟಿ, ಪೂರ್ಣಚಂದ್ರ ತೇಜಸ್ವಿ, ಸಂಕಲನದಲ್ಲಿ ಮನು ಶೇಡ್ಯಾರ್, ಕಲಾ ನಿರ್ದೇಶನದಲ್ಲಿ ವರದರಾಜ್ ಕಾಮತ್ ಸಹಕಾರ ನೀಡಿದ್ದಾರೆ.
ಕರಾವಳಿಯ ಹಲವು ಪ್ರತಿಭಾನ್ವಿತ ನಟರ ಜೊತೆಗೆ ಚಿತ್ರೀಕರಣ ನಡೆದ ಮಡಪ್ಪಾಡಿಯ ಒಂದಷ್ಟು ಗ್ರಾಮಸ್ಥರು ಕೂಡ ನಟಿಸಿರುವುದು ವಿಶೇಷ.
ರಾಜ್ ಸೌಂಡ್ಸ್ ಆಂಡ್ ಲೈಟ್ಸ್ ಇತ್ಯಾದಿ ಚಿತ್ರಗಳಿಗೆ ಛಾಯಾಗ್ರಹಣ ಮಾಡಿರುವ ವಿಷ್ಣುಪ್ರಸಾದ್, ಅಮ್ಮೆರ್ ಪೋಲಿ ಸಾ ಇತ್ಯಾದಿ ಚಿತ್ರಗಳಿಗೆ ಸಂಗೀತ ನೀಡಿರುವ ಪ್ರಸಾದ್ ಕೆ ಶೆಟ್ಟಿ, ಸಂಕಲನ ಮಾಡಿರುವ ಮನು ಶೇಡ್ಯಾರ್ ಸೇರಿದಂತೆ ತಂತ್ರಜ್ಞರಲ್ಲಿ 80% ಕರಾವಳಿಯ ಪ್ರತಿಭಾನ್ವಿತರಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ನಾಯಕ ನಟ ಯಶ್ ಶೆಟ್ಟಿ, ನಾಯಕಿ ನಟಿ ಹರ್ಷಿತಾ ರಾಮಚಂದ್ರ, ಮಿಲನ್ ಉಪಸ್ಥಿತರಿದ್ದರು.
























