ಕದ್ದ ಚಿನ್ನವನ್ನು ಇನ್ನೊಂದು ಬ್ಯಾಂಕಿನಲ್ಲಿ ಅಡವಿಟ್ಟು ಸಾಲ ಪಡೆದು ವಂಚನೆ
ಮಂಗಳೂರು : ಬ್ಯಾಂಕ್ ಮ್ಯಾನೇಜರ್ ಒಬ್ಬ ತನ್ನದೇ ಬ್ಯಾಂಕಿನಿಂದ 6.5 ಕೆಜಿಯಷ್ಟು ಚಿನ್ನ ಕದ್ದು ಅದನ್ನು ಇನ್ನೊಂದು ಬ್ಯಾಂಕಿನಲ್ಲಿ ಅಡವಿಟ್ಟು ಹಣ ಪಡೆದ ಘಟನೆ ಮಂಗಳೂರಿನಲ್ಲಿ ಸಂಭವಿಸಿದೆ. ಶಕ್ತಿನಗರ ವ್ಯವಸಾಯ ಸೇವಾ ಸಹಕಾರಿ ಸಂಘದ ಮ್ಯಾನೇಜರ್ ಗ್ರಾಹಕರು ತನ್ನ ಬ್ಯಾಂಕಿನಲ್ಲಿ ಅಡವಿಟ್ಟಿದ್ದ 6.5 ಕೆಜಿ ಚಿನ್ನಾಭರಣಗಳನ್ನು ಕದ್ದು, ಕೋ-ಆಪರೇಟಿವ್ ಸೊಸೈಟಿ ಒಂದರಲ್ಲಿ ಅಡವಿಟ್ಟು 3.5 ಕೋಟಿ ರೂ. ಸಾಲ ಪಡೆದಿದ್ದಾನೆ. ಮಂಗಳೂರಿನ ಶಕ್ತಿನಗರದ ಪದುವಾ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಘಟನೆ ನಡೆದಿದ್ದು, ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಮುಖ ಆರೋಪಿ ಸಹಕಾರಿ ಸಂಘದ ವ್ಯವಸ್ಥಾಪಕ ಪ್ರೀತೇಶ್ ಎಂದು ಗುರುತಿಸಲಾಗಿದೆ. ವಂಚನೆ ಕೃತ್ಯಕ್ಕೆ ಸಹಾಯ ಮಾಡಿದ ಶೇಖ್ ಮೊಹಮ್ಮದ್ ಎಂಬ ವ್ಯಕ್ತಿಯನ್ನು ಸಹ ಬಂಧಿಸಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನೂ ಇಬ್ಬರು ವ್ಯಕ್ತಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಆರೋಪಿ ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಬ್ಯಾಂಕ್ನ ಲಾಕರ್ನಿಂದ ಅಡವಿಟ್ಟ ಚಿನ್ನವನ್ನು ಹೊರತೆಗೆದಿದ್ದಾನೆ. ನಂತರ ತನ್ನ ಸಹಚರರ ಮೂಲಕ ಅದೇ ಆಭರಣಗಳನ್ನು ಶಕ್ತಿನಗರದ ಮತ್ತೊಂದು ಸಹಕಾರಿ ಸಂಘದಲ್ಲಿ ಅಡವಿಟ್ಟು 3.25 ಕೋಟಿ ರೂ. ಸಾಲ ಪಡೆದಿದ್ದಾನೆ. ವಂಚನೆಯ ಸುದ್ದಿ ಗೊತ್ತಾಗುತ್ತಿದ್ದಂತೆ ಪ್ರೀತೇಶ್ ಬೆಂಗಳೂರು ವಿದೇಶಕ್ಕೆ ಪರಾರಿಯಾಗಿದ್ದ. ಪೊಲೀಸರು ಬಂಧನಕ್ಕಾಗಿ ಲುಕೌಟ್ ನೋಟಿಸ್ ಜಾರಿ ಮಾಡಿದ್ದರು. ಇದೀಗ ಪ್ರಮುಖ ಆರೋಪಿ ಪ್ರೀತೇಶ್ ವಿದೇಶದಿಂದ ಬಂದು ಮಂಗಳೂರಿನ ಕೋರ್ಟಿಗೆ ಶರಣಾಗಿದ್ದಾನೆ. ಆತನನ್ನು ಜೈಲಿಗೆ ಹಾಕಲಾಗಿದೆ ಎಂದು ತಿಳಿದುಬಂದಿದೆ.
ನಿಜವಾದ ಆಭರಣಗಳನ್ನು ಬಳಸಿ 3.5 ಕೋಟಿ ರೂ. ಸಾಲ ಪಡೆದ ನಂತರ, ಪ್ರೀತೇಶ್ ಮೂಲ ಗ್ರಾಹಕರನ್ನು ವಂಚಿಸಲು ಯೋಜನೆ ರೂಪಿಸಿದ್ದ ಎನ್ನಲಾಗಿದೆ. ಚಿನ್ನವನ್ನು ಒಂದೇ ವಿನ್ಯಾಸದ ನಕಲಿ ಆಭರಣಗಳಿಂದ ಬದಲಾಯಿಸುವ ಮೂಲಕ ಈ ಯೋಜನೆ ರೂಪಿಸಿದ್ದ. ಈ ಉದ್ದೇಶಕ್ಕಾಗಿ ಸುಮಾರು 3.5 ಕೆಜಿ ರೋಲ್ಡ್ ಗೋಲ್ಡ್ ಆಭರಣಗಳನ್ನು ತಯಾರಿಸಲಾಗಿತ್ತು. ಈ ನಕಲಿ ಒಡವೆಗಳನ್ನು ಶೇಖ್ ಮೊಹಮ್ಮದ್ನಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ.
























