ಮಂಗಳೂರು: ಬಂಟ್ವಾಳದಲ್ಲಿ ಹಾಡಹಗಲೇ ನಡೆದ ಅಬ್ದುಲ್ ರಹಿಮಾನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇನ್ನೋರ್ವ ಆರೋಪಿಯನ್ನು ಬಂಧಿಸಿದ್ದಾರೆ. ಬಂಟ್ವಾಳ ತುಂಬೆ ಗ್ರಾಮದ ನಿವಾಸಿ ಶಿವಪ್ರಸಾದ್ (33) ಬಂಧಿತ ಆರೋಪಿ. ಈಗಾಗಲೇ ಪ್ರಕರಣ ಸಂಬಂಧ ಬಂಟ್ವಾಳದ ಕುರಿಯಾಳ ನಿವಾಸಿ ದೀಪಕ್ (21), ಅಮ್ಮುಂಜೆ ನಿವಾಸಿ ಪೃಥ್ವಿರಾಜ್ (21), ಅಮ್ಮುಂಜೆ ನಿವಾಸಿ ಚಿಂತನ್ (19), ಸುಮಿತ್, ರವಿರಾಜ್ ಸೇರಿ 9 ಆರೋಪಿಗಳನ್ನು ಬಂಧಿಸಲಾಗಿದೆ. ಬಂಟ್ವಾಳದ ರಾಯಿ ಎಂಬಲ್ಲಿ ಆರೋಪಿ ಶಿವಪ್ರಸಾದ್‌ನನ್ನು ವಶಕ್ಕೆ ಪಡೆಯಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ಕೋರ್ಟ್ ಪೊಲೀಸ್ ಕಸ್ಟಡಿಗೆ ನೀಡಿದೆ. ಬಂಟ್ವಾಳ ಡಿವೈಎಸ್‌ಪಿ ವಿಜಯ್ ಪ್ರಸಾದ್ ನೇತೃತ್ವದಲ್ಲಿ 5 ವಿಶೇಷ ತಂಡಗಳನ್ನ ಮಾಡಿ ತನಿಖೆ ನಡೆಯುತ್ತಿದೆ.
ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಯಾಗಿ ತಿಂಗಳು ಕಳೆಯುವ ಮೊದಲೇ ಮೇ 27ರಂದು ಬಂಟ್ವಾಳದ ಕುರಿಯಾಳ ಈರಾಕೋಡಿ ಎಂಬಲ್ಲಿ ಮಧ್ಯಾಹ್ನ 3.30ರ ಸುಮಾರಿಗೆ ಕೊಳತ್ತಮಜಲ್ ನಿವಾಸಿ ಅಬ್ದುಲ್ ರಹಿಮಾನ್‌ನನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಪಿಕಪ್ ವಾಹನ ಹೊಂದಿರೋ ಅಬ್ದುಲ್ ರಹೀಂ ಬಳಿ ಒಂದು ಲೋಡ್ ಮರಳು ಬೇಕೆಂದು ದುಷ್ಕರ್ಮಿಗಳು ಕುರಿಯಾಳದ ಇರಾಕೋಡಿಗೆ ಕರೆಸಿಕೊಂಡಿದ್ದರು. ಮರಳು ಇಳಿಸಿದ ಕೆಲವೇ ಕ್ಷಣದಲ್ಲಿ ಅಲ್ಲೇ ಹೊಂಚು ಹಾಕಿ ಕುಳಿತಿದ್ದ ದುಷ್ಕರ್ಮಿಗಳು ಏಕಾಏಕಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಬರ್ಬರವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದರು.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಬ್ದುಲ್ ರಹೀಂ ಅವರನ್ನು ತಕ್ಷಣ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದರೂ ಆ ವೇಳೆ ಮೃತಪಟ್ಟಿದ್ದರು. ರಹೀಂ ಜೊತೆಗಿದ್ದ ಕಲಂಧರ್ ಶಾಫಿ ಎಂಬವರಿಗೂ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ್ದು, ಗಂಭೀರ ಗಾಯದೊಂದಿಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.
























