ಕುಡಿಯಲು ನೀರು ಸಿಗದೆ ಬಾಯಾರಿಕೆಯಿಂದ ಎದೆ ಒಣಗಿ ಸತ್ತ ಪಾಕಿಸ್ತಾನದ ಯುವ ಜೋಡಿ

ಅಕ್ರಮವಾಗಿ ನುಸುಳಿ ಬರುವ ದುಸ್ಸಾಹಸ ಪ್ರಾಣಕ್ಕೆ ಎರವಾಯಿತು

ಜೈಪುರ: ಪಾಕಿಸ್ತಾನ ಮೂಲದ ಹಿಂದೂ ಧರ್ಮದ ಯುವಕ ಮತ್ತು ಯುವತಿಯ ಮೃತದೇಹ ಭಾರತ-ಪಾಕ್‌ ಅಂತಾರಾಷ್ಟ್ರೀಯ ಗಡಿ ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ನಿಗೂಢ ರೀತಿಯಲ್ಲಿ ಪತ್ತೆಯಾಗಿದೆ. ಮೃತದೇಹದ ಪಕ್ಕದಲ್ಲಿ ಗುರುತಿನ ಚೀಟಿಯೂ ಕಂಡು ಬಂದಿದೆ. ಜೈಸಲ್ಮೇರ್‌ನ ಭಾರತ-ಪಾಕಿಸ್ತಾನ ಗಡಿಯ ಬಳಿಯ ಮರಳು ದಿಬ್ಬಗಳಲ್ಲಿ ಪತ್ತೆಯಾದ ಯುವಕ ಮತ್ತು ಅಪ್ರಾಪ್ತೆಯ ಮೃತದೇಹಗಳು ಕೊಳೆತ ಸ್ಥಿತಿಯಲ್ಲಿದ್ದವು. ಶವದ ಸ್ಥಿತಿ ನೋಡಿದರೆ ಇವರು ಮೃತಪಟ್ಟು ವಾರ ಕಳೆದಿರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಕುಡಿಯಲು ನೀರು ಸಿಗದೆ ಬಾಯಾರಿಕೆಯಿಂದ ಎದೆ ಒಣಗಿ ಅವರು ಸತ್ತಿದ್ದಾರೆ ಎನ್ನಲಾಗಿದೆ.

ಅಂತಾರಾಷ್ಟ್ರೀಯ ಗಡಿಯಿಂದ ಸುಮಾರು 10ರಿಂದ 12 ಕಿ.ಮೀ. ಭಾರತದ ಒಳಗೆ ತನೌಟ್ ಮತ್ತು ಸಾಧೇವಾಲಾ ಪ್ರದೇಶದಲ್ಲಿ ಮೃತದೇಹಗಳು ಪತ್ತೆಯಾಗಿವೆ ಎಂದು ವರದಿಯಾಗಿದೆ. ಮೃತದೇಹಗಳ ಬಳಿ ಪಾಕಿಸ್ತಾನದ ಮೊಬೈಲ್‌ ಸಿಮ್‌ ಮತ್ತು ಗುರುತಿನ ಚೀಟಿ ಪತ್ತೆಯಾಗಿದ್ದರಿಂದ ಇವರು ಪಾಕ್‌ ಮೂಲದವರೆಂದ ದೃಢಪಡಿಸಲಾಗಿದೆ. ಈ ಗುರುತಿನ ಚೀಟಿ ಪ್ರಕಾರ ಈ ಇಬ್ಬರ ವಯಸ್ಸು 20 ವರ್ಷದೊಳಗಿದೆ. ಯುವಕನನ್ನು ರವಿ ಕುಮಾರ್‌ (18) ಮತ್ತು ಅಪ್ರಾಪ್ತೆಯನ್ನು ಶಾಂತಿ ಭಾಯಿ (15) ಎಂದು ಗುರುತಿಸಲಾಗಿದೆ. ವಾರದ ಹಿಂದ ಇವರು ಗಡಿ ದಾಟಿ ಭಾರತಕ್ಕೆ ನುಸುಳಲು ಯತ್ನಿಸಿದ್ದರು ಎಂದು ಶಂಕಿಸಲಾಗಿದೆ.





















































 
 

ಭಾರತದಲ್ಲಿ ನೆಮ್ಮದಿಯ ಜೀವನ ಸಾಗಿಸುವ ಸಲುವಾಗಿ ವೀಸಾಕ್ಕೆ ಅರ್ಜಿ ಹಾಕಿದ್ದರು. ಆದರೆ ಪಹಲ್ಗಾಮ್‌ ಉಗ್ರ ದಾಳಿಯ ಬಳಿಕ ಪಾಕಿಸ್ಥಾನಿಯರಿಗೆ ವೀಸಾ ರದ್ದುಪಡಿಸಿದ ಹಿನ್ನೆಲೆಯಲ್ಲಿ ಅವರಿಗೆ ವೀಸಾ ನೀಡಿರಲಿಲ್ಲ. ಹೀಗಾಗಿ ಇಬ್ಬರು ಅಕ್ರಮವಾಗಿ ಗಡಿದಾಟಿ ಬರಲು ಯತ್ನಿಸಿದ್ದರು ಎನ್ನಲಾಗಿದೆ.

ಮೃತದೇಹ ಪತ್ತೆಯಾದ ಮಾಹಿತಿ ತಿಳಿದ ತಕ್ಷಣ ಹಿರಿಯ ಪೊಲೀಸ್ ಮತ್ತು ಗಡಿ ಭದ್ರತಾ ಪಡೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಇದಾದ ಬಳಿಕ ಗಡಿಯಲ್ಲಿ ಭದ್ರತೆ ಇನ್ನಷ್ಟು ಬಿಗಿಗೊಳಿಸಲಾಗಿದ್ದು, ಬಿಎಸ್‌ಎಫ್ ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದೆ. ಆದರೆ ಗಡಿಯಾಚೆಯಿಂದ ಭಾರತೀಯ ಪ್ರದೇಶಕ್ಕೆ ನುಸುಳುವಿಕೆಯ ಯಾವುದೇ ಕುರುಹುಗಳು ಅಥವಾ ಹೆಜ್ಜೆಗುರುತುಗಳು ಕಂಡುಬಂದಿಲ್ಲ.

ಪೊಲೀಸರು ಶವಗಳನ್ನು ರಾಮಗಢ ಶವಾಗಾರದಲ್ಲಿ ಇರಿಸಿದ್ದು, ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ. ಅದು ಹೊರ ಬಂದ ಬಳಿಕ ಸಾವಿಗೆ ನಿಜವಾದ ಕಾರಣ ಗೊತ್ತಾಗಲಿದೆ. ಪೊಲೀಸರು ಮತ್ತು ಭದ್ರತಾ ಸಂಸ್ಥೆಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ನಡೆಸುತ್ತಿದೆ. ಗಡಿ ಪ್ರದೇಶದಲ್ಲಿ ಸಮಗ್ರ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಆದರೆ ಇಲ್ಲಿಯವರೆಗೆ, ಪಾಕಿಸ್ತಾನದ ಕಡೆಯಿಂದ ಇತ್ತೀಚೆಗೆ ನುಸುಳುವಿಕೆಯನ್ನು ಸೂಚಿಸುವ ಯಾವುದೇ ಪುರಾವೆಗಳು ಅಥವಾ ಹೆಜ್ಜೆಗುರುತುಗಳು ಕಂಡುಬಂದಿಲ್ಲ ಎಂದು ಬಿಎಸ್‌ಎಫ್ ಐಜಿ ಎಂಎಲ್ ಗರ್ಗ್ ತಿಳಿಸಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top