ಗೋಮಾಂಸ ಸಾಗಿಸಲು ಬಳಸಿದ್ದ ಕಾರು, ಸ್ಕೂಟಿ ವಶ
ಉಡುಪಿ : ಬ್ರಹ್ಮಾವರ ತಾಲೂಕಿನ ಕುಂಜಾಲುವಿನಲ್ಲಿ ಹಸುವಿನ ರುಂಡ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಆರೋಪಿಗಳನ್ನು ಬ್ರಹ್ಮಾವರ ಠಾಣೆ ಪೊಲೀಸರು ಬಂಧಿಸಿದ್ದಾರೆ. ತಲೆಮೆರೆಸಿಕೊಂಡಿರುವ ಮತ್ತೊಬ್ಬ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಕೇಶವ, ರಾಮಣ್ಣ, ನವೀನ್, ಪ್ರಸಾದ್, ರಾಜೇಶ್, ಸಂದೇಶ್ ಬಂಧಿತರು. ಕುಂಜಾಲು ರಾಮ ಮಂದಿರದ ಬಳಿ ಶನಿವಾರ ತಡರಾತ್ರಿ ಗೋವಿನ ರುಂಡ ಪತ್ತೆಯಾದ ಘಟನೆ ಜಿಲ್ಲೆಯಲ್ಲಿ ಭಾರಿ ಸಂಚಲನವುಂಟು ಮಾಡಿತ್ತು. ಹಿಂದು ಸಂಘಟನೆಗಳು ಹೋರಾಟದ ಎಚ್ಚರಿಕೆ ನೀಡಿದ ಬೆನ್ನಲ್ಲೇ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಘಟನೆ ಸಂಬಂಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆಗೆ ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ನಾಲ್ಕು ತಂಡಗಳನ್ನು ರಚಿಸಿದರು. ಘಟನೆ ನಡೆದು 24 ಗಂಟೆಯೊಳಗಾಗಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕುಂಜಾಲು ಗ್ರಾಮದ ನಿವಾಸಿ ರಾಮಣ್ಣ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ. ಕೇಶವ್ ಎಂಬಾತ ಹಸು ನೋಡಿಕೊಳ್ಳಲು ಆಗುತ್ತಿಲ್ಲವೆಂದು ರಾಮಣ್ಣಗೆ ನೀಡಿದ್ದ ಎಂದು ಹರಿರಾಮ್ ಶಂಕರ್ ತಿಳಿಸಿದ್ದಾರೆ. ಸಂದೇಶ್ ಎಂಬವನ ಸ್ವಿಫ್ಟ್ ಕಾರಿನಲ್ಲಿ ಹಸುವನ್ನು ಸಾಗಾಟ ಮಾಡಲಾಗಿತ್ತು. ಕ್ವಾರಿ ಬಳಿ ಆರೋಪಿಗಳಾದ ಪ್ರಸಾದ್, ನವೀನ್ ಮತ್ತು ರಾಮಣ್ಣ ಮೂವರು ಸೇರಿಕೊಂಡು ಹಸು ಕಡಿದಿದ್ದರು. ಬಳಿಕ ಹಸುವಿನ ದೇಹವನ್ನು ದ್ವಿಚಕ್ರ ವಾಹನದಲ್ಲಿ ತೆಗೆದುಕೊಂಡು ಹೋಗುವಾಗ ಮಾರ್ಗ ಮಧ್ಯೆ ತಲೆ ರಾಮ ಮಂದಿರದ ಬಳಿ ಬಿದ್ದಿದೆ. ಆರೋಪಿಗಳು ಉದ್ದೇಶಪೂರ್ವಕವಾಗಿ ಹಸುವಿನ ರುಂಡ ದೇವಸ್ಥಾನದ ಬಳಿ ಇಟ್ಟಿರಲಿಲ್ಲ. ಸಾಗಾಟದ ವೇಳೆ ಆಕಸ್ಮಿಕವಾಗಿ ಹಸುವಿನ ತಲೆ ಬಿದ್ದಿದೆ. ಆರೋಪಿಗಳು ಗೋಮಾಂಸ ಸಾಗಿಸಲು ಬಳಸಿದ್ದ ಸ್ಕೂಟಿ, ಕಾರು ವಶಕ್ಕೆ ಪಡೆದಿದ್ದೇವೆ ಎಂದು ತಿಳಿಸಿದ್ದಾರೆ.
























