ಪುತ್ತೂರು: ನಮಗೆ ನ್ಯಾಯ ದೊರಕಿಸಿಕೊಡುವಂತೆ ಹಿಂದೂ ಮುಖಂಡರು ಸೇರಿದಂತೆ ಪುತ್ತೂರು ಮಹಿಳಾ ಠಾಣೆಗೂ ನಾವು ಈಗಾಗಲೇ ಹಲವು ಬಾರಿ ಮನವಿ ಮಾಡಿದ್ದೇವೆ. ಆದರೆ ನಮ್ಮ ಮಗಳಿಗೆ ಆದ ಅನ್ಯಾಯಕ್ಕೆ ಯಾರು ತಲೆಕೆಡಿಸುತ್ತಿಲ್ಲ. ನಮಗೆ ನ್ಯಾಯ ದೊರೆಯದಿದ್ದಲ್ಲಿ ನಾವು ಯಾವುದೇ ಆಮಿಷಗಳಿಗೆ ಬಗ್ಗುವುದಿಲ್ಲ, ಎಲ್ಲಾ ರೀತಿಯ ಹೋರಾಟಕ್ಕೂ ಸಿದ್ಧ ಎಂದು ಇತ್ತೀಚೆಗೆ ಬಿಜೆಪಿ ಮುಖಂಡರೊಬ್ಬರ ಪುತ್ರನಿಂದ ಅತ್ಯಾಚಾರಕ್ಕೊಳಗಾಗಿ ಮಗುವಿಗೆ ಜನ್ಮ ನೀಡಿದ್ದ ಸಂತ್ರಸ್ತೆಯ ತಾಯಿ ತಿಳಿಸಿದ್ದಾರೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಹಿಂದೂ ಮುಖಂಡರೊಬ್ಬರು 10 ಲಕ್ಷ ರೂ. ಕೊಡುತ್ತೇನೆ ಎಂದರು, ಮತ್ತೊಬ್ಬರು ಹುಡುಗನ ಭವಿಷ್ಯದ ನಿಟ್ಟಿನಲ್ಲಿ ಕೇಸು ಹಿಂತೆಗೆದುಕೊಳ್ಳಿ ಎಂದರು, ಮತ್ತೊಬ್ಬ ಹಿಂದೂ ಮುಖಂಡ ನಾನು ನಡುವೆ ಬಂದರೆ ತಪ್ಪಾಗುತ್ತದೆ ಎಂದರು. ಕೋಟಿ ಕೊಟ್ಟರೂ ನನಗೆ ಬೇಡ ಎಂದು ಹೇಳಿದೆ ಎಂದು ತಿಳಿಸಿದರು.
ಮದುವೆ ಮಾಡಿಕೊಡುವುದಾಗಿ ಠಾಣೆಯಲ್ಲಿ ಆರೋಪಿಯ ತಂದೆ ಜಗನ್ನಿವಾಸ್ ಮುಚ್ಚಳಿಕೆಯನ್ನೂ ಬರೆದು ಕೊಟ್ಟಿದ್ದಾರೆ. ಜೂನ್ 23 ಕ್ಕೆ ಆರೋಪಿಗೆ 21 ವರ್ಷ ತುಂಬಿತ್ತು. ಜೂನ್ 22 ರಂದು ಆರೋಪಿ ನನಗೆ ಕಾಲ್ ಮಾಡಿ ನಿಮ್ಮ ಮಗಳನ್ನು ನಾನು ಮದುವೆಯಾಗೋದಿಲ್ಲ ಎಂದು ತಿಳಿಸಿದ್ದಾನೆ. ಅಲ್ಲದೆ ಆತನ ತಾಯಿ ನಿಮ್ಮ ಮಗಳನ್ನು ಆತನಿಗೆ ಮದುವೆ ಮಾಡುವ ಸಾಧ್ಯತೆಯೂ ಇಲ್ಲ ಎಂದು ಹೇಳಿ ಮಗುವನ್ನು ಅಬೋರ್ಷನ್ ಮಾಡಿ ತೆಗಿಸಿ, ಅದಕ್ಕೆ ಬೇಕಾದ ಹಣವನ್ನು ಕೊಡುತ್ತೇವೆ ಎಂದು ಆರೋಪಿಯ ತಂದೆ ನಮಗೆ ಹೇಳಿದ್ದಾರೆ. ಆದರೆ ನಾವು ಅದಕ್ಕೆ ಒಪ್ಪಿಲ್ಲ, ಮಗು ಆರೋಪಿ ಕೃಷ್ಣ.ಜೆ.ರಾವ್ ನದ್ದೇ ಎನ್ನುವುದಕ್ಕೆ ಎಲ್ಲಾ ಪುರಾವೆಗಳೂ ಇವೆ. ನಾವು ಮೊದಲಿನಿಂದಲೇ ಮಗುವಿನ ಡಿ.ಎನ್.ಎ ಪರೀಕ್ಷೆ ಮಾಡಲು ಸಿದ್ಧರಿದ್ದೇವೆ, ಮಗುವಿಗೆ ಮೂರು ತಿಂಗಳು ಕಳೆದ ಬಳಿಕ ಡಿಎನ್ಎ ಪರೀಕ್ಷೆ ನಡೆಸಲಾಗುತ್ತದೆ ಎಂದರು.
ಕಳೆದ ಏಳು ವರ್ಷಗಳಿಂದ ನನ್ನ ಮಗಳು ಹಾಗೂ ಅತ್ಯಾಚಾರ ಮಾಡಿದ ಆರೋಪಿ ಪ್ರೀತಿಸುತ್ತಿದ್ದರು. ಈ ನಡುವೆ ಮದುವೆಯಾಗುವುದಾಗಿ ನಂಬಿಸಿ ನನ್ನ ಮಗಳನ್ನು ಮನೆಗೆ ಕರೆಸಿ ಅತ್ಯಾಚಾರ ಮಾಡಿದ್ದಾನೆ. ಆ ಬಳಿಕ ನನ್ನ ಮಗಳು ಗರ್ಭವತಿಯಾಗಿದ್ದಾಳೆ. ಇದನ್ನು ಆರೋಪಿಯ ತಂದೆಯಲ್ಲಿ ಮಾತುಕತೆ ಮೂಲಕ ತಿಳಿಸಿದಾಗ ಮದುವೆಯಾಗಲು ಒಪ್ಪಿಗೆ ನೀಡಿರುತ್ತಾರೆ. ಹೀಗೆ ಮದುವೆ ಪ್ರಸ್ತಾಪವನ್ನು ಕಳೆದ ಒಂದೂವರೆ ತಿಂಗಳಿನಿಂದ ಹೇಳುತ್ತಾ ಬಂದಿದ್ದರು. ಆದರೆ ಕಾರ್ಯರೂಪಕ್ಕೆ ತಂದಿಲ್ಲ. ಈ ನಿಟ್ಟಿನಲ್ಲಿ ನಾವು ಹುಡುಗನ ವಿರುದ್ಧ ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದೇವೆ. ಈ ನಡುವೆ ಪ್ರತಿಷ್ಠಿತ ರಾಜಕೀಯ ಮುಖಂಡರೊಬ್ಬರು ಹುಡುಗನ ಭವಿಷ್ಯದ ಹಿನ್ನಲೆಯಲ್ಲಿ ಕೇಸು ಹಿಂತೆಗೆದುಕೊಳ್ಳುವಂತೆ ಒತ್ತಾಯ ಹೇರಿದ್ದರು. ಆ ಕಾರಣಕ್ಕೆ ನಾವು ಕೇಸು ಹಿಂತೆಗೆದುಕೊಂಡಿದ್ದೆವು. ಅದಾದ ಬಳಿಕ ಹುಡುಗನ ಮನೆಯಲ್ಲಿ ಮಾತುಕತೆ ನಡೆಸಿದಾಗ ಆರೋಪಿ ಮದುವೆಯಾಗಲು ನಿರಾಕರಿಸಿದ್ದ. ಫೋನ್ ನಲ್ಲಿ ಆತನಲ್ಲಿ ತಿಳಿಸಿದಾಗ ಆ ಮಗು ತನ್ನದಲ್ಲ ಎಂದಿದ್ದಾನೆ. ಮದುವೆಯಾಗಲು ಒತ್ತಾಯ ಮಾಡಿದಾಗ ನಾನು ಆತ್ಮಹತ್ಯೆ ಮಾಡುತ್ತೇನೆ ಎಂದು ಸಮಜಾಯಿಷಿ ನೀಡಿದ್ದ. ಇದೀಗ ಆತ ತಲೆಮರೆಸಿಕೊಂಡಿದ್ದಾನೆ ಎಂದು ತಮ್ಮ ಅಳಲನ್ನು ತೋರಿಕೊಂಡರು.
ಈ ನಡುವೆ ಆರೋಪಿಯ ಮನೆಯವರಲ್ಲಿ ನಾವು ಪದೇ ಪದೇ ಮದುವೆಯಾಗುವಂತೆ ತಿಳಿಸಿದಾಗ, ಹುಡುಗನ ತಂದೆ ನೀವು ಮನೆಬಿಟ್ಟು ಹೋಗಬೇಕು. ಇಲ್ಲದಿದ್ದಲ್ಲಿ ನಿಮ್ಮ ಜೀವಕ್ಕೆ ಅಪಾಯ ಆಗಲಿದೆ ಎಂದು ಬೆರಿಕೆಯನ್ನೂ ಹಾಕಿದ್ದರು ಎಂದು ತಿಳಿಸಿದರು.
ನಾವು ಎಸ್ ಪಿಯವರಲ್ಲೂ ಹೋಗಿ ಮನವಿ ಮಾಡಿದ್ದೇವೆ. ಹುಡುಗನ್ನು ಹುಡುಕಿ ಕೊಡುತ್ತೇವೆ ಎಂದು ಅವರೂ ಹೇಳಿದ್ದಾರೆ. ಆದರೆ ಇದುವರೆಗೂ ಆತನನ್ನು ಹುಡಕಿಕೊಡಲು ಸಾಧ್ಯವಾಗಿಲ್ಲ ಎಂದು ತಿಳಿಸಿದರು.
ನಾವು ಡಿಎನ್ ಎ ಟೆಸ್ಟ್ ಗೂ ರೆಡಿಯಿದ್ದೇವೆ. ಆದರೆ ಹುಡುಗನ ತಂದೆ ಡಿಎನ್ ಎ ಟೆಸ್ಟ್ ಬೇಡ. ನಾವು ಮದುವೆ ಮಾಡಿಸುತ್ತೇವೆ ಎಂದು ಹೇಳುತ್ತಲೇ ಬಂದಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿಯನ್ನು ಪತ್ತೆಹಚ್ಚಲು ಸಾಧ್ಯವಾಗದಿದ್ದರೆ ಆತನ ತಂದೆಯನ್ನು ಠಾಣೆಗೆ ಕರೆಸಿ ಮಗ ಎಲ್ಲಿದ್ದಾನೆ ಎಂದು ಕೇಳಲಿ ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ನಂದಿತಾ ಉಪಸ್ಥಿತರಿದ್ದರು.
























