ವೈಟಿಂಗ್ ಲಿಸ್ಟ್‌ನಲ್ಲಿರುವ ಪ್ರಯಾಣಿಕರ ಅನುಕೂಲಕ್ಕಾಗಿ ಬದಲಾವಣೆ
ನವದೆಹಲಿ: ಟಿಕೆಟ್ ಬುಕ್ಕಿಂಗ್ ಪ್ರಕ್ರಿಯೆಯನ್ನು ಇನ್ನಷ್ಟು ಪ್ರಯಾಣಿಕಸ್ನೇಹಿಯಾಗಿಸಲು ಮುಂದಾಗಿರುವ ರೈಲ್ವೆ ರಿಸರ್ವೇಷನ್ ಚಾರ್ಟ್ ತಯಾರಿಯನ್ನು ಬದಲಾಯಿಸಲಿದೆ. ಇನ್ನು ಮುಂದೆ ರೈಲು ಹೊರಡುವ 8 ಗಂಟೆಯ ಮೊದಲು ರಿಸರ್ವೇಷನ್ ಚಾರ್ಟ್ ಬಿಡುಗಡೆ ಮಾಡಲಾಗುತ್ತದೆ ಭಾರತೀಯ ರೈಲ್ವೆ ಸಚಿವಾಲಯ ತಿಳಿಸಿದೆ.
ಪ್ರಸ್ತುತ 4 ಗಂಟೆಯ ಮೊದಲು ರಿಸರ್ವೇಷನ್ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತಿದೆ. ಆದರೆ ಜುಲೈ 1ರಿಂದ ರೈಲು ಹೊರಡುವ 8 ಗಂಟೆಯ ಮೊದಲು ರಿಸರ್ವೇಷನ್ ಚಾರ್ಟ್ ಬಿಡುಗಡೆಯಾಗಲಿದೆ. ಇದರಿಂದ ಮುಖ್ಯವಾಗಿ ವೈಟಿಂಗ್ ಲಿಸ್ಟ್‌ನಲ್ಲಿರುವ ಪ್ರಯಾಣಿಕರಿಗೆ ಬಹಳ ಅನುಕೂಲವಾಗಲಿದೆ.
ಈ ಬದಲಾವಣೆಯಿಂದ ಪ್ರಯಾಣಿಕರಿಗೆ ತಮ್ಮ ಟಿಕೆಟ್ ಕನ್‌ಫರ್ಮ್ ಆಗಿದೆಯೇ ಅಥವಾ ಇಲ್ಲವೇ ಎನ್ನುವುದು ಸಾಕಷ್ಟು ಮುಂಚಿತವಾಗಿ ತಿಳಿಯಲಿದ್ದು, ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲು ಸಾಕಷ್ಟು ಸಮಾಯಾವಕಾಶ ಸಿಗುತ್ತದೆ. ವೈಟಿಂಗ್ ಲಿಸ್ಟ್‌ನಲ್ಲಿರುವ ಟಿಕೆಟ್ ಕನ್‌ಫರ್ಮ್ ಆಗದಿದ್ದರೆ ಪರ್ಯಾಯ ಪ್ರಯಾಣ ವ್ಯವಸ್ಥೆಗಳನ್ನು ಮಾಡಿಕೊಳ್ಳಬಹುದು.
ಜುಲೈ 1ರಿಂದ ಐಆರ್‌ಸಿಟಿಸಿ ವೆಬ್‌ಸೈಟ್ ಮತ್ತು ಮೊಬೈಲ್ ಅಪ್ಲಿಕೇಶನ್ ಮೂಲಕ ಪರಿಶೀಲಿಸಿದ ಬಳಕೆದಾರರಿಗೆ ಮಾತ್ರ ತತ್ಕಾಲ್ ಟಿಕೆಟ್‌ಗಳನ್ನು ಬುಕ್ ಮಾಡಲು ಅನುಮತಿ ನೀಡಲಾಗುವುದು ಎಂದು ಭಾರತೀಯ ರೈಲ್ವೆ ಹೇಳಿದೆ. ತತ್ಕಾಲ್ ಬುಕ್ಕಿಂಗ್‌ಗಳಿಗಾಗಿ ಒಟಿಪಿ ಆಧಾರಿತ ದೃಢೀಕರಣದ ಅನುಷ್ಠಾನ ಜುಲೈ ಕೊನೆಯಿಂದ ಆರಂಭವಾಗಲಿದೆ. ಬಳಕೆದಾರರು ಆಧಾರ್ ಅಥವಾ ತಮ್ಮ ಡಿಜಿ ಲಾಕರ್ ಖಾತೆಗಳಲ್ಲಿ ಸಂಗ್ರಹವಾಗಿರುವ ಇತರ ಸರ್ಕಾರಿ ಗುರುತಿನ ದಾಖಲೆಗಳನ್ನು ಬಳಸಿಕೊಂಡು ತಮ್ಮ ಗುರುತನ್ನು ಪರಿಶೀಲಿಸಬೇಕಾಗುತ್ತದೆ.
ಈ ಹಿಂದೆ ಆಧಾರ್-ಪ್ರಮಾಣೀಕೃತ ಬಳಕೆದಾರರು ಮಾತ್ರ ಜುಲೈ 1ರಿಂದ ತತ್ಕಾಲ್ ಟಿಕೆಟ್‌ಗಳನ್ನು ಬುಕ್ ಮಾಡಬಹುದಿತ್ತು. ಸೆಪ್ಟೆಂಬರ್ ವೇಳೆ ಪ್ರಯಾಣಿಕರ ಹೊಸ ರಿಸರ್ವೇಷನ್ ವ್ಯವಸ್ಥೆ ಜಾರಿಗೆ ಬರಲಿದೆ. ಸದ್ಯ ಪ್ರತಿ ನಿಮಿಷಕ್ಕೆ 32 ಸಾವಿರ ಟಿಕೆಟ್ ಬುಕ್ಕಿಂಗ್ ಮಾಡಬಹುದು. ಆದರೆ ವೆಬ್‌ಸೈಟ್ ನವೀಕರಣಗೊಳಿಸಿದ ಬಳಿಕ ಪ್ರತಿ ನಿಮಿಷಕ್ಕೆ 1.50 ಲಕ್ಷ ಟಿಕೆಟ್ ಬುಕ್ ಮಾಡುವಂತೆ ಅಪ್‌ಗ್ರೇಡ್ ಮಾಡಲಾಗುತ್ತದೆ. ಅಷ್ಟೇ ಅಲ್ಲದೇ ಬಹುಭಾಷೆಗಳನ್ನು ಬೆಂಬಲಿಸುವ ಬಳಕೆದಾರ ಸ್ನೇಹಿ ಇಂಟರ್ಫೇಸ್ ಇರಲಿದೆ.
























