ಪುತ್ತೂರು: ಕೊರ ತಂಙಳ್ ಎಂದೇ ಪ್ರಸಿದ್ದರಾಗಿದ್ದ ಸಯ್ಯದ್ ನಝಲ್ ಕೋಯಮ್ಮ ತಂಙಳ್ ಅಲ್ ಬುಖಾರಿ ಅವರ ಸ್ಮರಣಾರ್ಥವಾಗಿ ಜೂನ್ 26ರಿಂದ 29 ರ ವರೆಗೆ ನಡೆದ ವಾರ್ಷಿಕ ಉರೂಸ್ ಮುಬಾರಕ್ ಕಾರ್ಯಕ್ರಮದ ಅಂತಿಮ ದಿನವಾದ ಭಾನುವಾರ ಪ್ರಾರ್ಥನೆ ಹಾಗೂ ಅನ್ನದಾನ ಕಾರ್ಯಕ್ರಮಕ್ಕೆ ನಿರೀಕ್ಷೆಗೂ ಮೀರಿ ಭಕ್ತರ ಸಾಗರ ಹರಿದುಬಂದ ಪರಿಣಾಮ, ನೂಕುನುಗ್ಗಲು ಉಂಟಾಗಿ ಹಲವರು ಅಸ್ವಸ್ಥರಾದ ಘಟನೆ ನಡೆದಿದೆ.
ತಂಬಳ್ ಅವರ ಮೇಲಿನ ಭಕ್ತಿಯಿಂದ ರಾಜ್ಯದ ವಿವಿಧ ಭಾಗಗಳಿಂದ ಒಟ್ಟು ಒಂದು ಲಕ್ಷಕ್ಕೂ ಅಧಿಕ ಜನರು ಬಂದಿದ್ದರು. ಜನಸಂದಣಿ ಹೆಚ್ಚಾಗುತ್ತಿದ್ದಂತೆ ನೂಕುನುಗ್ಗಲಿನಿಂದ ಹಸ್ನಾ (18), ಪಾಯಿಝಾ (18), ಸಮನ್ (19), ಮೈಮೂನಾ (36) ಸೇರಿದಂತೆ ಆರು ಮಂದಿ ತೀವು ಅಸ್ವಸ್ಥರಾಗಿದ್ದು, ಅವರನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ಮೂವರು ಕಾಣಿಯೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳದಲ್ಲೇ ಆರೋಗ್ಯ ಇಲಾಖೆ ಸ್ಥಾಪಿಸಿದ್ದ ತಾತ್ಕಾಲಿಕ ವೈದ್ಯಕೀಯ ಶಿಬಿರದಲ್ಲಿ 20ಕ್ಕೂ ಹೆಚ್ಚು ಜನರಿಗೆ ಪ್ರಥಮ ಚಿಕಿತ್ಸೆ ನೀಡಲಾಯಿತು.
ಭಾನುವಾರ ಮುಂಜಾನೆಯಿಂದಲೂ ಲಕ್ಷಾಂತರ ಭಕ್ತರು ವಾಹನಗಳಲ್ಲಿ ಆಗಮಿಸಿದ್ದರಿಂದ ಉರೂಸ್ ನಡೆಯುವ ಪ್ರದೇಶದ ಎಲ್ಲಾ ರಸ್ತೆಗಳಲ್ಲೂ ಭಾರೀ ಸಂಚಾರ ದಟ್ಟಣೆ ಉಂಟಾಯಿತು.
























