ಪುತ್ತೂರು : ಸನಾತನ ಹಿಂದೂ ಧರ್ಮದ ಆಳ, ಅಗಲವನ್ನು ತಿಳಿದುಕೊಳ್ಳಲು ಯಾರಿಂದಲೂ ಸಾಧ್ಯವಾಗಿಲ್ಲ. ಅಂದರೆ ಹಿಂದೂ ಧರ್ಮ ಅತ್ಯಂತ ಪುರಾತನವಾದದ್ದು. ಇಂತಹಾ ಹಿಂದೂ ಧರ್ಮವನ್ನು ಧರ್ಮ ಶಿಕ್ಷಣದ ಮೂಲಕ ಉಳಿಸಿ ಬೆಳೆಸುವಲ್ಲಿ ಮುಂದಿನ ಪೀಳಿಗೆಯ ಮಹತ್ತರವಾದ ಜವಾಬ್ದಾರಿ ಎಂದು ತಾಲೂಕು ಹಿಂದೂ ಧರ್ಮ ಶಿಕ್ಷಣ ಸಮಿತಿ ಅಧ್ಯಕ್ಷ ಬಾಲಕೃಷ್ಣ ಬೋರ್ಕರ್ ಅಭಿಪ್ರಾಯಪಟ್ಟರು.

ಅವರು ಭಾನುವಾರ ನೆಕ್ಕರೆ ಶ್ರೀ ಚಾಮುಂಡೇಶ್ವರಿ, ಸ್ವಾಮಿ ಕೊರಗಜ್ಜ ಕ್ಷೇತ್ರದಲ್ಲಿ ಧರ್ಮ ಶಿಕ್ಷಣ ತರಗತಿಯನ್ನು ಉದ್ಘಾಟಿಸಿ ಮಾತನಾಡಿದರು.

ಪ್ರಸ್ತುತ ಸನಾತನ ಧರ್ಮದ ಕುರಿತು ಗೊಂದಲವಿದ್ದು, ಅಂತಹಾ ಸನ್ನಿವೇಶದಲ್ಲಿ ನಾವಿದ್ದೇವೆ. ಈ ನಿಟ್ಟಿನಲ್ಲಿ ಶೃಂಗೇರಿ ಸ್ವಾಮೀಜಿಯವರು ಧರ್ಮಾಭ್ಯುದಯ ಮೂಲಕ ಪ್ರತೀ ಹಳ್ಳಿ, ಪಟ್ಟಣಗಳಲ್ಲಿ ಹಿಂದೂ ಧರ್ಮದ ಕುರಿತು ತಿಳುವಳಿಕೆ ನೀಡುವ ವ್ಯವಸ್ಥೆಯಲ್ಲಿ ಧರ್ಮಾಭ್ಯುದಯ ಕಾರ್ಯಕ್ರಮ ಹಮ್ಮಿಕೊಂಡಿದ್ದರೆ ಎಂದು ತಿಳಿಸಿದರು.
ತಾಲೂಕು ಹಿಂದೂ ಧರ್ಮ ಶಿಕ್ಷಣದ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ, ಪ್ರಸ್ತುತ ಕಾಲಘಟ್ಟದಲ್ಲಿ ಶಿಕ್ಷಣ ಸಂಸ್ಥಗಳಲ್ಲಿ ಸಿಗುವ ಎಂಜಿನಿಯರ್, ಡಾಕ್ಟರ್, ಮುಂತಾದ ಹತ್ತು ಹಲವು ಶಿಕ್ಷಣ ಹೊಟ್ಟೆಪಾಡಿಗಾಗಿಯೇ ಹೊರತು ಮನುಷ್ಯತ್ವವನ್ನು ಬೆಳೆಸುವ ಶಿಕ್ಷಣಗಳಾಗುವುದಿಲ್ಲ. ಮನುಷ್ಯನನ್ನು ಮನುಷ್ಯನನ್ನಾಗಿ ಮಾಡುವುದರ ಜತೆಗೆ ರಾಷ್ಟ್ರಪ್ರೇಮ ಮೂಡಿಸುತ್ತೆ. ಧರ್ಮವನ್ನು ಉಳಿಸುವ ಕೆಲಸ ಮಾಡುತ್ತದೆ ಎಂದ ಅವರು, ಧರ್ಮ ಶಿಕ್ಷಣ ಪರ್ಯಾಯ ಶಿಕ್ಷಣ ವ್ಯವಸ್ಥೆ ಆಗಬೇಕು ಎಂಬ ನಿಟ್ಟಿನಲ್ಲಿ ಶೃಂಗೇರಿ ಸ್ವಾಮೀಜಿಗಳು ಧರ್ಮಾಭ್ಯುದಯ ಹೆಸರಿನಲ್ಲಿ ಧರ್ಮ ಶಿಕ್ಷಣ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ನೆಕ್ಕರೆ ಧರ್ಮ ಶಿಕ್ಷಣದ ಗೌರವಾಧ್ಯಕ್ಷ ಬಾಬು ನೆಕ್ಕರೆ ಮಾತನಾಡಿ, ಈ ಕ್ಷೇತ್ರದಲ್ಲಿ ಪ್ರತಿಯೊಂದು ಕಾಲಕಾಲಕ್ಕೆ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ಸ್ಥಳೀಯ ಭಕ್ತರು ಸಹಕರಿಸುತ್ತಿದ್ದು, ಇದೀಗ ಧರ್ಮ ಶಿಕ್ಷಣದ ಕಾರ್ಯಕ್ರಮಕ್ಕೂ ಸಹಕಾರ ನೀಡುತ್ತಿದ್ದಾರೆ. ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಮುಖ್ಯ ಅತಿಥಿಯಾಗಿ ಎಂಜಿನಿಯರ್ ಮನೀಶ್‍ರೈ ಪಾಲ್ಗೊಂಡಿದ್ದರು. ವೇದಿಕೆಯಲ್ಲಿ ಸ್ಥಳೀಯ ಧರ್ಮ ಶಿಕ್ಷಣದ ಉಪಾಧ್ಯಕ್ಷ ಶ್ರೀಧರ ಪೂಜಾರಿ, ಪ್ರಧಾನ ಕಾರ್ಯದರ್ಶಿ ಲಲಿತಾ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಧರ್ಮ ಶಿಕ್ಷಣದ ಶಿಕ್ಷಕಿಯರಾದ ಅಶ್ವಿನಿ, ಯಶೋಧ, ಸ್ವಾತಿ, ಮಾತೃ ಪ್ರಮುಖ್‍ಕಾವ್ಯ ಗಣೇಶ್‍ಭಟ್, ಸಮಿತಿ ಜತೆಕಾರ್ಯದರ್ಶಿ ಭವ್ಯ ಆರ್ಯಮುಗೇರ್, ಸಂಘಟನಾ ಕಾರ್ಯದರ್ಶಿ ವಸಂತ ಕುಮಾರ್, ಸದಸ್ಯರಾದ ಮೋಹಿನಿ ಶೆಟ್ಟಿ ಕಂಚಲಗುರಿ, ನಾರಾಯಣ ಕುಲಾಲ್, ಇಂದಿರಾ, ಮೋನಪ್ಪ ನಾಯ್ಕ, ಚೋಮ ನಾಯ್ಕ, ಸ್ಥಳೀಯರು ಉಪಸ್ಥಿತರಿದ್ದರು. ಬಿಂದು ಪ್ರಾರ್ಥನೆ ಹಾಡಿದರು. ರೂಪೇಶ್ ವಂದಿಸಿದರು. ಸಭಾ ಕಾರ್ಯಕ್ರಮದ ಮೊದಲು ಶ್ರೀ ನಂದಿಕೇಶ್ವರ ಭಜನಾ ತಂಡದಿಂದ ಭಜನಾ ಕುಣಿತ ಭಜನೆ ನಡೆಯಿತು. ಭಜನಾ ತಂಡದ ಮುಖ್ಯಸ್ಥ ವಸಂತ ನೇತೃತ್ವ ವಹಿಸಿದ್ದರು.
























