ಪುರಿ ರಥಯಾತ್ರೆಯಲ್ಲಿ ಕಾಲ್ತುಳಿತ : ಮೂವರು ಸಾವು

ದರ್ಶನಕ್ಕಾಗಿ ಭಕ್ತರು ಮುಗಿಬಿದ್ದಾಗ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ

ನವದೆಹಲಿ: ಒಡಿಶಾದ ಪುರಿಯಲ್ಲಿ ಜಗತ್ಪ್ರಸಿದ್ಧ ಜಗನ್ನಾಥನ ರಥಯಾತ್ರೆಯ ಸಮಯದಲ್ಲಿ ಇಂದು ಮುಂಜಾನೆ ಕಾಲ್ತುಳಿತ ಸಂಭವಿಸಿದ್ದು, ಇಬ್ಬರು ಮಹಿಳೆಯರು ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ. 10 ಜನರು ಗಾಯಗೊಂಡಿದ್ದು, ಈ ಪೈಕಿ 6 ಮಂದಿಯ ಸ್ಥಿತಿ ಚಿಂತಾಜನಕವಿದೆ ಎನ್ನಲಾಗಿದೆ.
ಜಗನ್ನಾಥ, ಬಲರಾಮ ಮತ್ತು ಸುಭದ್ರ ದೇವಿಯ ವಿಗ್ರಹಗಳನ್ನು ಹೊತ್ತ ಮೂರು ರಥಗಳು ಜಗನ್ನಾಥ ದೇವಾಲಯದಿಂದ ಸುಮಾರು ಮೂರು ಕಿಲೋಮೀಟರ್ ದೂರದಲ್ಲಿರುವ ಶ್ರೀ ಗುಂಡಿಚಾ ದೇವಾಲಯದ ಬಳಿ ಹಾದು ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಇಂದು ಬೆಳಗಿನ ಜಾವ 4.30ರ ಸುಮಾರಿಗೆ ಪವಿತ್ರ ರಥಗಳು ಗುಂಡಿಚಾ ದೇವಸ್ಥಾನದಲ್ಲಿದ್ದವು. ದರ್ಶನಕ್ಕಾಗಿ ದೊಡ್ಡ ಜನಸಮೂಹ ಜಮಾಯಿಸಿತ್ತು. ರಥಗಳು ಸಮೀಪಿಸುತ್ತಿದ್ದಂತೆ ಜನಸಂದಣಿ ಹೆಚ್ಚಾಯಿತು, ಕೆಲವರು ಬಿದ್ದರು ಮತ್ತು ಕಾಲ್ತುಳಿತ ಸಂಭವಿಸಿದೆ. ಮೂವರು ಸ್ಥಳದಲ್ಲೇ ಸಾವನ್ನಪ್ಪಿದರು. ಇವರಲ್ಲಿ ಇಬ್ಬರು ಮಹಿಳೆಯರು. ಅವರನ್ನು ಪ್ರಭಾತಿ ದಾಸ್ ಮತ್ತು ಬಸಂತಿ ಸಾಹು ಮತ್ತು ಪುರುಷನನ್ನು 70 ವರ್ಷದ ಪ್ರೇಮಕಾಂತ್ ಮೊಹಂತಿ ಎಂದು ಗುರುತಿಸಲಾಗಿದೆ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ.

ಶನಿವಾರ ನಸುಕಿನ ಹೊತ್ತು ಪುರಿ ದೇವಸ್ಥಾನದ ಸಮೀಪವೇ ಬಲರಾಮನ ರಥ ಎಳೆಯುವಾಗ ನೂಕುನುಗ್ಗಲಿನ ಪರಿಸ್ಥಿತಿ ಉಂಟಾಗಿ ಸುಮಾರು 600 ಮಂದಿ ಅಸ್ವಸ್ಥರಾಗಿದ್ದರು. ಈ ಜನರು ಅಸ್ವಸ್ಥರಾಗಲು ಕಾಲ್ತುಳಿತ ಕಾರಣವಲ್ಲ, ವಿಪರೀತ ಜನಸಂದಣಿಯಿಂದಾಗಿ ಜನರಿಗೆ ಉಸಿರುಕಟ್ಟಿದಂತಾಗಿ ಅಸ್ವಸ್ಥರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪುರಿಯ ವಿಶ್ವಪ್ರಸಿದ್ಧ ರಥಯಾತ್ರೆ ನಡೆಯುತ್ತಿದ್ದು, ಅಲ್ಲಿ 10 ಲಕ್ಷಕ್ಕೂ ಹೆಚ್ಚು ಜನರು ಜಮಾಯಿಸಿದ್ದಾರೆ.





















































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top