ಇನ್‌ಸ್ಟಾಗ್ರಾಂ ಗೆಳತಿಯನ್ನು ಕರೆದುಕೊಂಡು ಬಂದು ಕಾರಿನಲ್ಲಿ ದೌರ್ಜನ್ಯ
ಮಂಗಳೂರು : ಉಳ್ಳಾಲ ಸಮೀಪ ಸೋಮೇಶ್ವರ ಬೀಚ್‌ನಲ್ಲಿ ಅಪ್ರಾಪ್ತ ವಯಸ್ಸಿನ ಯುವತಿ ಮೇಲೆ ಅತ್ಯಾಚಾರ ಎಸಗಲು ಯತ್ನಿಸಿದ ಯುವಕನ ವಿರುದ್ಧ ಪೋಕ್ಸೊ ಕೇಸ್ ದಾಖಲಾಗಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾದ ಹದಿಹರೆಯದ ಬಾಲಕಿಯನ್ನು ಸೋಮೇಶ್ವರ ಬೀಚ್ ಬಳಿ ಕರೆದುಕೊಂಡು ಬಂದ ಯುವಕ ಕಾರಿನಲ್ಲೇ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಬಾಲಕಿ ನೀಡಿದ ದೂರಿನನ್ವಯ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿದೆ.
ಅಡ್ಯಾರ್ ವಳಚ್ಚಿಲ್ ನಿವಾಸಿ ಕೆಲ್ವಿನ್ (24) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ಕೆಲ್ವಿನ್ ತಲಪಾಡಿ ನಿವಾಸಿ ಬಾಲಕಿಯನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯ ಮಾಡಿಕೊಂಡಿದ್ದ. ನಂತರ ಆಕೆಯನ್ನು ಪ್ರೀತಿಸುವುದಾಗಿ ನಂಬಿಸಿ, ಫೋನ್ ಕರೆ ಮೂಲಕ ಸಂಪರ್ಕಿಸಿ ಕಳೆದ ಗುರುವಾರ ಕೆಲ್ವಿನ್ ಆಕೆಯನ್ನು ಆಕೆಯ ಮನೆ ಬಳಿಯೇ ಭೇಟಿ ಮಾಡಿ ನಂತರ ತನ್ನ ಕಾರಲ್ಲಿ ಸೋಮೇಶ್ವರ ಬೀಚ್‍ಗೆ ಕರೆದೊಯ್ದಿದ್ದ. ಈ ವೇಳೆ ವಿರೋಧ ವ್ಯಕ್ತಪಡಿಸಿದರೂ ಆರೋಪಿ ಅತ್ಯಾಚಾರಕ್ಕೆ ಯತ್ನಿಯತ್ನಿಸಿದ್ದಾನೆ ಎಂದು ಬಾಲಕಿ ಪೊಲೀಸರಿಗೆ ದೂರು ನೀಡಿದ್ದಾಳೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
























