ರೈಲಿನಲ್ಲಿ ಪ್ರಯಾಣಿಸುವಾಗ ಬ್ಯಾಗಿನಿಂದ ಕಳವಾಗಿದ್ದ ಆಭರಣ
ಹಾಸನ : ದೇಶ-ಕಾಲದ ಬಗ್ಗೆ ಭವಿಷ್ಯ ನುಡಿದು ಖ್ಯಾತರಾಗಿರುವ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಹಾರನಹಳ್ಳಿಯ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳ ಚಿನ್ನ ಮತ್ತು ನಗದು ಕಳ್ಳತನ ಮಾಡಿದ್ದ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ. ಏಳು ವರ್ಷಗಳ ಹಿಂದೆ ಈತ ಕಳ್ಳತನ ನಡೆದಿತ್ತು. ಉತ್ತರಾಖಂಡದ ನೈನಿತಾಲ್ ಮೂಲದ ಜಿತೇಂದ್ರ ಕುಮಾರ್ ಎಂಬಾತ ಆರೋಪಿ.
2018ರಲ್ಲಿ ಸ್ವಾಮೀಜಿ ಬಾಗಲಕೋಟೆಯಿಂದ ಅರಸೀಕೆರೆಗೆ ರೈಲಿನ ಎಸಿ ಕೋಚ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಲೆದರ್ ಬ್ಯಾಗ್‌ನಲ್ಲಿ 250 ಗ್ರಾಂ ಚಿನ್ನದ ಸರ, ಗೌರಿಶಂಕರ ರುದ್ರಾಕ್ಷಿ ಪದಕ, 50 ಗ್ರಾಂನ ಎರಡು ಚಿನ್ನದ ಉಂಗುರಗಳು ಹಾಗೂ 1.62 ಲಕ್ಷ ರೂ. ನಗದು ಹಣವನ್ನು ಇಟ್ಟಿದ್ದರು. ತಲೆಯ ಕೆಳಗೆ ಬ್ಯಾಗ್ ಇಟ್ಟು ನಿದ್ದೆಗೆ ಜಾರಿದ್ದ ಸ್ವಾಮೀಜಿ ನಸುಕಿನ 2.15ಕ್ಕೆ ಎದ್ದು ನೋಡಿದಾಗ ಬ್ಯಾಗ್ ಸ್ಥಾನ ಬದಲಾಗಿ, ಅದರಲ್ಲಿದ್ದ ಚಿನ್ನಾಭರಣ ಮತ್ತು ಹಣ ಕಾಣೆಯಾಗಿತ್ತು.
ಜಿತೇಂದ್ರ ಕುಮಾರ್ ರೈಲಿನ ಎಸಿ ಕೋಚ್‌ಗಳಲ್ಲಿ ಪ್ರಯಾಣಿಕನಂತೆ ಟಿಕೆಟ್ ಖರೀದಿಸಿ, ಚಿನ್ನಾಭರಣ ಮತ್ತು ಹಣ ಇರುವವರನ್ನು ಗುರಿಯಾಗಿಸಿ ಕಳ್ಳತನ ಮಾಡುತ್ತಿದ್ದ. ಇವನು ವಾಹನ ಡೀಲರ್ ಕೆಲಸದ ಜೊತೆಗೆ ಹಣದ ಅಗತ್ಯಕ್ಕೆ ತಕ್ಕಂತೆ ರೈಲುಗಳಲ್ಲಿ ಕಳ್ಳತನಕ್ಕಿಳಿಯುತ್ತಿದ್ದ. ಚಿನ್ನಾಭರಣ, ಹಣ ಇರುವರನ್ನು ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಆರೋಪಿ. ಇತ್ತೀಚೆಗೆ ಉಡುಪಿಯಿಂದ ಬೆಂಗಳೂರಿಗೆ ಬರುತ್ತಿದ್ದ ವೃದ್ಧರ ಬಳಿ 65 ಸಾವಿರ ರೂ. ಮೌಲ್ಯದ ಚಿನ್ನಾಭರಣ, ಹಣ ಕಳ್ಳತನ ಮಾಡಿದ್ದ. ಈ ಕೇಸ್ ತನಿಖೆ ನಡೆಸುತ್ತಿದ್ದ ಅರಸಿಕೇರೆ ಪೊಲೀಸರು ಜಿತೇಂದ್ರನನ್ನು ಬಂಧಿಸಿ ಅವನಿಂದ 22.75 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಂಧನದಿಂದ ಕರ್ನಾಟಕ, ತಮಿಳುನಾಡು, ಮಧ್ಯಪ್ರದೇಶ ಮತ್ತು ಉತ್ತರಾಖಂಡದಲ್ಲಿ ನಡೆದ 13 ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ.
























