ಆದಾಯ ತೆರಿಗೆ ಸಲ್ಲಿಕೆಗೆ ಹೊಸ ನಿಯಮ ಜಾರಿ
ನವದೆಹಲಿ : ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಹೊಸ ನಿಯಮ ಜಾರಿಯಾಗಿದ್ದು, ಇನ್ನು ಮುಂದೆ ರಿಟರ್ನ್ಸ್ ಸಲ್ಲಿಸುವಾಗ ತಪ್ಪು ಮಾಹಿತಿ ನೀಡುವ ಅಥವಾ ಆದಾಯವನ್ನು ಮರೆಮಾಚುವ ತೆರಿಗೆದಾರರಿಗೆ ಆದಾಯ ತೆರಿಗೆ ಇಲಾಖೆ ಕಠಿಣ ಎಚ್ಚರಿಕೆ ನೀಡಿದೆ.
ತೆರಿಗೆದಾರರು ಸುಳ್ಳು ಮಾಹಿತಿಗಳನ್ನು ತೋರಿಸಿದರೆ ಅಥವಾ ಆದಾಯ ಮರೆಮಾಚಿದರೆ ಶೇ. 200ರವರೆಗೆ ದಂಡ, ವಾರ್ಷಿಕ ಶೇ. 24ವರೆಗೆ ಬಡ್ಡಿ ವಿಧಿಸಲಾಗುತ್ತದೆ. ಅಲ್ಲದೇ ಸೆಕ್ಷನ್ 276ಸಿ ಅಡಿಯಲ್ಲಿ ಜೈಲು ಶಿಕ್ಷೆ ವಿಧಿಸುವ ಅವಕಾಶವೂ ಇದೆ. ಹಾಗಾಗಿ ಸಣ್ಣ ತಪ್ಪುಗಳಿಗೂ ತೆರಿಗೆ ಪಾವತಿದಾರರು ದೊಡ್ಡ ಬೆಲೆ ತೆರಬೇಕಾಗುತ್ತದೆ.
ಒಂದು ವೇಳೆ ಲೆಕ್ಕ ಪರಿಶೋಧಕರು ಅಥವಾ ತೆರಿಗೆ ಸಲಹೆಗಾರರು ತಪ್ಪು ಮಾಡಿದರೂ, ಕಾನೂನಿನ ಪ್ರಕಾರ ತೆರಿಗೆದಾರರೇ ಸಂಪೂರ್ಣ ಜವಾಬ್ದಾರರಾಗುತ್ತಾರೆ ಎಂದು ತೆರಿಗೆ ಇಲಾಖೆ ಸ್ಪಷ್ಟಪಡಿಸಿದೆ. ಈ ಹೊಸ ಕಠಿಣ ನಿಯಮಗಳು ಯಾವುದೇ ವಿನಾಯಿತಿ ಇಲ್ಲದೆ ಎಲ್ಲರಿಗೂ ಅನ್ವಯಿಸುತ್ತವೆ. ಸಂಬಳ ಪಡೆಯುವ ನೌಕರರು, ಫ್ರೀಲ್ಯಾನ್ಸರ್‌ಗಳು ಹಾಗೂ ಡಾಕ್ಟರ್, ವಕೀಲರು ಸೇರಿದಂತೆ ಇತರ ವೃತ್ತಿಪರರು ಮತ್ತು ಉದ್ಯಮಿಗಳಿಗೂ ಅನ್ವಯಿಸುತ್ತದೆ.
























