ಪುತ್ತೂರು: ಪುತ್ತೂರಿನ ಖಾಸಗಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಯೋರ್ವ ತನ್ನ ಸಹಪಾಠಿಯನ್ನು ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಗರ್ಭಿಣಿಯನ್ನಾಗಿಸಿದ ಬಳಿಕ ವಂಚಿಸಿ ಪರಾರಿಯಾಗಿರುವ ಘಟನೆಗೆ ಸಂಬಂಧಿಸಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿ ದಿಢೀರ್ ರದ್ದಾದ ಘಟನೆ ಶುಕ್ರವಾರ ನಡೆದಿದೆ.
ಪುತ್ತೂರಿನ ಬಪ್ಪಳಿಗೆ ನಿವಾಸಿಯಾಗಿರುವ ಇಂಜಿನಿಯರಿಂಗ್ ವಿದ್ಯಾರ್ಥಿಯೋರ್ವನಿಂದ ವಂಚನೆಗೆ ಒಳಗಾಗಿದ್ದಾರೆ ಎಂದು ಹೇಳಲಾಗುತ್ತಿರುವ ವಿದ್ಯಾರ್ಥಿನಿಯ ತಾಯಿ ಪುತ್ತೂರಿನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಿಗದಿ ಪಡಿಸಿದ್ದರು.
ಇದರ ಮಾಹಿತಿ ತಿಳಿದ ಪತ್ರಕರ್ತರು ಪತ್ರಿಕಾಗೋಷ್ಠಿಗೆ ಆಗಮಿಸಿದ್ದರು. ಆದರೆ ಕೊನೇಯ ಘಳಿಗೆಯಲ್ಲಿ ಪತ್ರಿಕಾಗೋಷ್ಠಿ ರದ್ದು ಪಡಿಸಲಾಗಿದೆ. ರಾಜಕೀಯ ಒತ್ತಡದಿಂದ ಪತ್ರಿಕಾಗೋಷ್ಠಿ ನಿಗದಿ ಪಡಿಸಲಾಗಿತ್ತು ಮತ್ತು ರಾಜಕೀಯ ಒತ್ತಡದಿಂದ ಪತ್ರಿಕಾಗೋಷ್ಠಿ ರದ್ದು ಪಡಿಸಲಾಯಿತು ಎನ್ನಲಾಗಿದೆ. ಈ ಮಧ್ಯೆ ತಲೆ ಮರೆಸಿಕೊಂಡಿರುವ ವಿದ್ಯಾರ್ಥಿಯು ಪತ್ತೆಗೆ ಪೊಲೀಸರ ಶೋಧ ಕಾರ್ಯ ಮುಂದುವರಿದಿದೆ ಎಂದು ತಿಳಿದು ಬಂದಿದೆ.
























