ಪುತ್ತೂರು: ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘದ ಜಂಟಿ ಆಶ್ರಯದಲ್ಲಿ ತಾಲೂಕು ಮಟ್ಟದ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಸಭಾಭವನದಲ್ಲಿ ಶುಕ್ರವಾರ ನಡೆಯಿತು.
ಪುತ್ತೂರು ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ ಕಾರ್ಯಕ್ರಮ ಉದ್ಘಾಟಿಸಿ, ಶುಭ ಹಾರೈಸಿದರು.
ನಾಡಪ್ರಭು ಕೆಂಪೇಗೌಡರು ನಾಡನ್ನು ಕಟ್ಟಿದ ತುಡಿತ ಅದ್ಭುತ : ಭವ್ಯ ಪಿ.ಆರ್. ನಿಡ್ಪಳ್ಳಿ
ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಭವ್ಯ ಪಿ.ಆರ್. ನಿಡ್ಪಳ್ಳಿ ಸಂಸ್ಮರಣಾ ಉಪನ್ಯಾಸ ಮಾಡಿ, ದಾರ್ಶನಿಕ, ಮೇಧಾವಿ, ಮಹಾತ್ಮ ಎನಿಸಿಕೊಂಡ ಕೆಂಪೇಗೌಡ ಬದುಕು, ಸಾಧನೆ ನೋಡಿದಾಗ ನಮ್ಮನ್ನು ನಾವು ಆತ್ಮಾವಲೋಕನ ಮಾಡಬೇಕಾದ ಅನಿವಾರ್ಯತೆಯಿದ್ದು, ಈ ಮೂಲಕ ಸಮಾಜ ಕಟ್ಟುವ ಕೆಲಸ ಮಾಡಬೇಕಾಗಿದೆ. ಅವರು ನಾಡನ್ನು ಕಟ್ಟಿದ ತುಡಿತ ಅದ್ಭುತವಾಗಿದೆ. ಅವರ 11ನೇ ವಯಸ್ಸಿನ ಕನಸು ಬೆಂಗಳೂರಿನ ಸಿಲಿಕಾನ್ ಸಿಟಿ. ದೂರದೃಷ್ಟಿತ್ವವನ್ನು ನೋಡಿದಾಗ 16ನೇ ಶತಮಾನದಲ್ಲೇ ಕೃತಕ ಬುದ್ಧಿಮತ್ತೆ ಅವರಲ್ಲಿತ್ತು. ಬೆಂಗಳೂರನ್ನು ಸ್ಥಾಪಿಸಲು ಭದ್ರಬುನಾದಿ ಕೊಟ್ಟವರೇ ಕೆಂಪೇಗೌಡರು. ನೀರಿನ ಅಭಾವವಾಗದಂತೆ ಯೋಚನೆಗಳನ್ನು ರೂಪಿಸಿದ್ದಾರೆ. ಆದರೆ ದುರಾದೃಷ್ಟವಶಾತ್ ಇಂದು ಅವುಗಳನ್ನು ಉಳಿಸಿಕೊಳ್ಳುವುದರಲ್ಲಿ ಹಿಂದೆ ಬಿದ್ದಿದ್ದೇವೆ. ಅವರ 500 ವರ್ಷಗಳ ದೂರದೃಷ್ಟಿಯುಳ್ಳ ಬೆಂಗಳೂರು ಇಡೀ ಜಗತ್ತನ್ನು ತನ್ನತ್ತ ಸೆಳೆಯುತ್ತಿದೆ. ಇದರ ಹಿಂದಿರುವ ಶಿಲ್ಪಿ ಕೆಂಪೇಗೌಡರು ಎಂದರು.
ಕೆಂಪೇಗೌಡರ ಆದರ್ಶಗಳನ್ನು ವಿದ್ಯಾರ್ಥಿಗಳು ಮೈಗೂಡಿಕೊಂಡಾಗ ರಾಮರಾಜ್ಯವಾಗಲು ಸಾಧ್ಯ : ರವಿ ಮುಂಗ್ಲಿಮನೆ
ಮುಖ್ಯ ಅತಿಥಿಯಾಗಿ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ ಮಾತನಾಡಿ, ನಾಡಪ್ರಭು ಕೆಂಪೇ ಗೌಡರವರ ನೀಡದ ಕೊಡುಗೆ, ಅವರು ಮಾಡಿದ ಸಾಧನೆ ಇಡೀ ರಾಷ್ಟ್ರಕ್ಕೆ ಸಂಬಂಧಿಸಿದ್ದಾಗಿದೆ. ಹೀಗಾಗಿ ಅವರ ಜನ್ಮದಿನಾಚರಣೆಯೂ ಒಂದು ಸಮಾಜಕ್ಕೆ ಸೀಮಿತವಲ್ಲ. ಕೆಂಪೇ ಗೌಡರ ಮಾಡಿದ ಸಾಧನೆಗಳನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡುವ ಉದ್ದೇಶದಿಂದ ಈ ವರ್ಷ ಶಾಲೆಯಲ್ಲಿ ಆಚರಿಸಲಾಗುತ್ತಿದೆ. ಅವರ ಆದರ್ಶಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಂಡಾಗ ರಾಮ ರಾಜ್ಯವಾಗಲು ಸಾಧ್ಯ ಎಂದರು.
ಕೆಂಪೇಗೌಡರ ಸಾಧನೆಗಳನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ : ಲೋಕೇಶ್ ಎಸ್.ಆರ್.
ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್ ಮಾತನಾಡಿ, ಈಗಿರುವ ಬೆಂಗಳೂರಿನ ಕನಸನ್ನು ಐನೂರು ವರ್ಷಗಳ ಹಿಂದೆಯೇ ಯೋಚನೆ ಮಾಡಿದ್ದ ಕೆಂಪೇ ಗೌಡರವರು ಮಾಡಿದ ಸಾಧನೆಗಳನ್ನು ಉಳಿಸಿಕೊಳ್ಳು ಜವಾಬ್ದಾರಿ ನಮ್ಮ ಮೇಲಿದೆ ಎಂದರು.

ವೇದಿಕೆಯಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ, ತಹಶೀಲ್ದಾರ್ ನಾಗರಾಜ್ ವಿ., ನಗರಸಭೆ ಪೌರಾಯುಕ್ತ ಮಧು ಎಸ್.ಮನೋಹರ್ ಉಪಸ್ಥಿತರಿದ್ದರು. ಸಮಾರಂಭದಲ್ಲಿ ವಿವಿಧ ಇಲಖಾ ಅಧಿಕಾರಿಗಳು, ಶಾಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಶಿಕ್ಷಕರು ಉಪಸ್ಥಿತರಿದ್ದರು.

ಉಪ ತಹಸೀಲ್ದಾರ್ ಸುಲೋಚನಾ ಪಿ.ಕೆ. ಸ್ವಾಗತಿಸಿ, ತಾಲೂಕು ಕಚೇರಿಯ ವಿಷಯ ನಿರ್ವಾಹಕ ದಯಾನಂದ ಡಿ.ಟಿ. ವಂದಿಸಿದರು. ಶಿಕ್ಷಕರಾದ ಆಶಾ ಹಾಗೂ ಲತಾ ಕುಮಾರಿ ಕಾರ್ಯಕ್ರಮ ನಿರೂಪಿಸಿದರು. ಸಂಸ್ಮರಣಾ ಭಾಷಣದ ಸಂದರ್ಭ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳಾದ ಸಚ್ಚಿದಾನಂದ ಹಾಗೂ ಪ್ರಥಮ್ ಅವರಿಂದ ಕೆಂಪೇಗೌಡರ ಚಿತ್ರಗಳನ್ನು ಸ್ಥಳದಲ್ಲೇ ರಚಿಸಿದರು.
























